Hosapete, sidlaghatta : ಹಿಪ್ಪುನೇರಳೆಗೆ ನುಸಿಪೀಡೆ ಹೆಚ್ಚಿರುವುದರಿಂದ ಇಳುವರಿ ಹಾಗೂ ಸೊಪ್ಪಿನ ಸಾರ ಕುಂಠಿತಗೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಔಷದೋಪಚಾರ ಮಾಡಿ ಹಾಗೂ ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡುವುದರಿಂದ ರೋಗವನ್ನು ನಿಯಂತ್ರಿಸಬಹುದು ಎಂದು ಮಡಿವಾಳ ಕೇಂದ್ರದ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ನರೇಂದ್ರ ಕುಮಾರ್ ಹೇಳಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದ ರೈತ ಎಚ್.ಪಿ.ಕೃಷ್ಣಪ್ಪ ಅವರ ಹಿಪ್ಪುನೇರಳೆ ತೋಟದಲ್ಲಿ ರೇಷ್ಮೆ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಮುಂಗಾರಿನಲ್ಲಿ ಹಿಪ್ಪುನೇರಳೆ ತೋಟಗಳ ಸಂರಕ್ಷಣೆ ಮತ್ತು ನಿರ್ವಹಣೆ ಹಾಗೂ ಹಿಪ್ಪುನೇರಳೆ ತೋಟ ಮತ್ತು ರೇಷ್ಮೆ ಹುಳುಗಳಿಗೆ ತಗಲುವ ರೋಗಗಳು ಹಾಗೂ ಕೀಟಗಳ ನಿಯಂತ್ರಣ ಹಾಗೂ ಸಮಗ್ರ ನಿರ್ವಾಹಣೆ ಬಗ್ಗೆ ರೈತರಿಗೆ ಅರಿವು ಮೂಡಿಸಿ ಅವರು ಮಾತನಾಡಿದರು.
ಬ್ರಾಂಡ್ ನುಸಿ ಬಂದಿರುವ ತೋಟಗಳ ಅಕ್ಕಪಕ್ಕದ ತೋಟಗಳಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಸಾಮೂಹಿಕವಾಗಿ ಕತ್ತರಿಸಿ ತೋಟಗಳನ್ನು ಸ್ವಚ್ಚಗೊಳಿಸಬೇಕು. ನಂತರ ಚಿಗುರು ಹೊಡೆದ ನಂತರ ತಗಲುವ ಸುಸಿ ರೋಗ ಬರದಂತೆ ತಡೆಯಲು ಗಿಡಕ್ಕೆ ಎಲೆಗಳ ಕೆಳಭಾಗದಲ್ಲಿ ರಭಸವಾಗಿ ನೀರಿನ ಸಿಂಪರಣೆ ಮಾಡುವುದರಿಂದ ಸುಸಿ ಹುಳುಗಳ ಸಂಖ್ಯೆಯನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಎಂದರು.
ಹಿಪ್ಪುನೇರಳೆ ತೋಟಗಳ ಸ್ವಚ್ಚತೆ ಮತ್ತು ನಿರ್ವಾಹಣೆ ಬಗ್ಗೆ, ಬ್ರಾಂಡ್ ನುಸಿ ನಿರ್ವಹಣೆ, ಎಲೆ ಸುರಳಿ ಕೀಟಗಳ ನಿರ್ವಾಣೆ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.
ರೇಷ್ಮೆಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ ಮಾತನಾಡಿ, ರೈತರು ರೇಷ್ಮೆ ಸಂಶೋಧನಾ ಕೇಂದ್ರ ಮತ್ತು ರೇಷ್ಮೆ ಇಲಾಖೆ ಶಿಫಾರಸು ಮಾಡಿದ ಔಷಧಿಗಳನ್ನು ಮಾತ್ರ ಸಿಂಪಣೆ ಮಾಡಬೇಕೆಂದರು ರೈತರಿಗೆ ಸಲಹೆ ನೀಡಿದರು.
ಸಸ್ಯಜನ್ಯ ಉತ್ಪನ್ನಗಳಾದ ವಿಡಿ ಗ್ರೀನ್ ಪಾತ್ 2 ಮಿಲಿ ಒಂದು ಲೀಟರ್ ಜೊತೆಗೆ ಆಡ್ಪ್ರೋ ಶೂಟಿನ್ 0.3 ಮಿಲಿ ಒಂದು ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಒಂದು ವಾರದ ಅಂತರದಲ್ಲಿ ಎರಡು ಬಾರಿ ಸಿಂಪಡಿಸುವುದರಿಂದ ನುಸಿ ಹತೋಟಿಗೆ ಬರತ್ತದೆ ಎಂದರು.
ಸುರುಳಿ ರೋಗ ನಿವಾರಣೆ ಮಾಡಲು ಕಟಾವು ಮಾಡಿದ 12-15 ದಿನಗಳ ಅಂತರದಲ್ಲಿ ಇಂಟರ್ ಪೀಟ್ ಒಂದೂವರೆ ಎಂಎಲ್ ಒಂದು ಲೀಟರ್ ಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು, 20 ದಿನಗಳವರೆವಿಗೂ ಕಟಾವು ಮಾಡಬಾರದು, ಗಂದಕ 3 ಗ್ರಾಂ ಒಂದು ಲೀಟರ್ ನೀರಿನೊಂದಿಗೆ ಸೇರಿಸಿ 10 ದಿನಗಳ ಅಂತರದಲ್ಲಿ ಸಿಂಪರಣೆ ಮಾಡುವುದರಿಂದ ಸುರುಳಿ ರೋಗವನ್ನು ಹತೋಟಿಗೆ ತರಬಹುದು ಎಂದರು.
ಕೋಲಾರ ತಾಲ್ಲೂಕು ಮಡಿವಾಳ ರೇಷ್ಮೆ ಕೇಂದ್ರ ಮಂಡಳಿ ಹಿರಿಯ ತಾಂತ್ರಿಕ ಸಹಾಯಕ ಎನ್.ಕೆ.ಮೂರ್ತಿ, ಜಂಗಮಕೋಟೆ ರೇಷ್ಮೆ ತಾಂತ್ರಿಕ ಕೇಂದ್ರ ರೇಷ್ಮೆ ನಿರೀಕ್ಷಕ ಸೋಮಣ್ಣ ಮಕನಾಪುರ, ಹೊಸಪೇಟೆ, ಘಟಮಾರ್‍ಲಹಳ್ಳಿ, ಜಂಗಮಕೋಟೆ ರೈತರು ಭಾಗವಹಿಸಿದ್ದರು.