Sidlaghatta : ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು, ಸ್ವಚ್ಚ ಸುಂದರ ನಗರಗಳ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಕ್ರಮವಹಿಸಲಾಗಿದೆ. ಆದರೆ ಶಿಡ್ಲಘಟ್ಟ ನಗರದಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ಮಂಜುಳ ಬೇಸರ ವ್ಯಕ್ತಪಡಿಸಿದರು.
ನಗರದ ವಿವಿದೆಡೆ ಬುಧವಾರ ಭೇಟಿ ನೀಡಿದ ಅವರು ಮಾತನಾಡಿ, ಮನೆ ಮನೆಯಿಂದ ಕಸವನ್ನ ಸಂಗ್ರಹಿಸಬೇಕು. ಹಸಿ, ಒಣ ಕಸವನ್ನು ವಿಂಗಡಿಸಿ ಸ್ವೀಕರಿಸಬೇಕು. ಈ ಕಾರ್ಯಗಳೆ ಸರಿಯಾಗಿ ಆಗದಿದ್ದರೆ ಹೇಗೆ. ಬ್ಲಾಕ್ ಸ್ಪಾಟ್ ಗಳಲ್ಲಿ ಜನರು ಕಸ ಹಾಕುತ್ತಿದ್ದಾರೆ. ಅರಿವು ಮೂಡಿಸಿ ತ್ಯಾಜ್ಯವನ್ನು ಸೂಕ್ತ ವಿಲೆವಾರಿ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ, ನಂತರ ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ಕಟ್ಟಡ ಪರಿಶೀಲಿಸಿದರಲ್ಲದೆ ಆರೋಗ್ಯ ಕೇಂದ್ರಕ್ಕೆ ಬಂದಿದ್ದ ಹೊರ ರೋಗಿಗಳನ್ನು ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ಸಿಗುತ್ತಿರುವ ಸವಲತ್ತು, ವೈದ್ಯರ ಕಾರ್ಯವೈಖರಿ ಬಗ್ಗೆ ವಿಚಾರಿಸಿದರು.
ನಂತರ ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ಶಾಲೆ, ಅಲ್ಪಸಂಖ್ಯಾತ ಇಲಾಖೆಯ ಹಾಸ್ಟೆಲ್, ಉರ್ದು ಪ್ರೌಢಶಾಲೆ, ವಾಲ್ಮೀಕಿ ಭವನದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ತಾಲ್ಲೂಕಿನ ಹಲವು ಕಡೆ ಭೇಟಿ ನೀಡಿದ್ದು ಸಣ್ಣ ಪುಟ್ಟ ಸಮಸ್ಯೆಗಳು ಗಮನಕ್ಕೆ ಬಂದಿವೆ. ಅವೆಲ್ಲವೂ ಅಲ್ಲಲ್ಲೇ ನಿವಾರಿಸಿಕೊಳ್ಳಬಹುದಾಗಿದ್ದು ಸಂಬಂಧಿಸಿದವರಿಗೆ ಸರಿಪಡಿಸಿಕೊಳ್ಳಲು ಸೂಚಿಸಿದ್ದೇನೆ ಎಂದರು.
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ನೇಮಿಸಬೇಕೆಂಬ ಬೇಡಿಕೆ ಇದೆ. ಈಗಾಗಲೆ ಪುರಷ ವೈದ್ಯರಿದ್ದು ಹೆಚ್ಚೇನು ಸಮಸ್ಯೆ ಆಗದು ಎಂದರು. ಹೊರ ರೋಗಿಯ ನೋಂದಣಿ ಚೀಟಿ ಬರೆಸಿಕೊಳ್ಳಲು ಸರತಿ ಸಾಲು ಹೆಚ್ಚು ಇರಲಿದ್ದು ಅಲ್ಲಿ ಹೆಚ್ಚುವರಿಯಾಗಿ ಒಬ್ಬ ಸಿಬ್ಬಂದಿಯನ್ನು ನೇಮಿಸಲು ತಿಳಿಸಿದ್ದೇನೆಂದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಉಪ ಕಾರ್ಯದರ್ಶಿ ಡಾ.ಎನ್.ಭಾಸ್ಕರ್, ಇಒ ಮುನಿರಾಜು, ನಗರಸಭೆ ಪೌರಾಯುಕ್ತ ಆಂಜನೇಯ, ಸಿಡಿಪಿಒ ನವತಾಜ್, ಡಾ.ಮನೋಹರ್, ಬಿಸಿಎಂ ಇಲಾಖೆ ಅಧಿಕಾರಿ ಸಂಗಪ್ಪ ಪಾಟೀಲ್ ಹಾಜರಿದ್ದರು.