Sunday, September 8, 2024
HomeSidlaghattaಸ್ತ್ರೀಶಕ್ತಿ ಭವನ, ಅಂಗನವಾಡಿ ಕಟ್ಟಡ ನಿರ್ಮಾಣ, ಶಾಲೆಗಳಿಗೆ ಸಿಸಿ ಕ್ಯಾಮೆರಾ – ಕೆ.ಡಿ.ಪಿ ಸಭೆ ತೀರ್ಮಾನ

ಸ್ತ್ರೀಶಕ್ತಿ ಭವನ, ಅಂಗನವಾಡಿ ಕಟ್ಟಡ ನಿರ್ಮಾಣ, ಶಾಲೆಗಳಿಗೆ ಸಿಸಿ ಕ್ಯಾಮೆರಾ – ಕೆ.ಡಿ.ಪಿ ಸಭೆ ತೀರ್ಮಾನ

- Advertisement -
- Advertisement -
- Advertisement -
- Advertisement -

J Venkatapura, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.

ಪಂಚಾಯಿತಿ ವ್ಯಾಪ್ತಿಯ ಸುಗಟೂರು, ಜೆ.ವೆಂಕಟಾಪುರ, ಬೈರಸಂದ್ರ, ಬಳುವನಹಳ್ಳಿ, ಮಿತ್ತನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜಲಜೀವನ್ ಮಿಶನ್ ಯೋಜನೆಯಡಿ ಕೊಳವೆಬಾವಿ ಕೊರೆಯುವ, ಪೈಪ್‌ಲೈನ್ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರವೇ ಮನೆಮನೆಗಳಿಗೆ ನೀರು ಒದಗಿಸಲಾಗುವುದು. ತಲಾ ಮನೆಗೆ ಒಂದೇ ಸಂಪರ್ಕ ಪಡೆಯಲು ನಾಗರಿಕರು ಸಹಕರಿಸಬೇಕು. ಹಳೆ ಮಾದರಿ ಕಬ್ಬಿಣದ ಮತ್ತು ಶಿಥಿಲವಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷ ನಾಗೇಶ್ ತಿಳಿಸಿದರು.

ಶಿಕ್ಷಣ ಇಲಾಖೆ: ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಿರಿಯ ಪ್ರಾಥಮಿಕ ಮತ್ತು ಒಂದು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಸಿಸಿ ಕ್ಯಾಮೆರಾ, ಸೋಲಾರ್ ಶಕ್ತಿ ಪ್ಯಾನೆಲ್‌ ಗಳನ್ನು ಅಳವಡಿಸಲಾಗುವುದು. ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಭೌತಿಕ ಮತ್ತು ಕಲಿಕಾಪರಿಸರ ಬಹು ಸುಂದರವಾಗಿದ್ದು ಸ್ಮಾರ್ಟ್ ಕ್ಲಾಸ್, ಇಂಗ್ಲೀಷ್ ಮಾಧ್ಯಮ, ಅಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಎಲ್‌.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳನ್ನು ಆರಂಭಿಸುವುದಲ್ಲದೇ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.

ಜೆ.ವೆಂಕಟಾಪುರ ಗ್ರಾಮದ ಶಾಲೆಯಲ್ಲಿಯೂ ಇಂಗ್ಲೀಷ್ ಮಾಧ್ಯಮ ಆರಂಭಿಸಿದ್ದು ಜೆ.ವೆಂಕಟಾಪುರ, ಬೈರಸಂದ್ರ ಶಾಲೆಗಳಲ್ಲಿಯೂ ಸ್ಮಾರ್ಟ್ ಕ್ಲಾಸ್‌ಗೆ ಬೇಕಾದ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.

ಬೈರಸಂದ್ರ ಸರ್ಕಾರಿ ಶಾಲೆಗೆ ಸಂಪು ನಿರ್ಮಾಣ, ಅಡುಗೆ ಕೋಣೆ, ಶೌಚಾಲಯಗಳ ನಿರ್ಮಾಣ, ಬೈರಸಂದ್ರ ಶಾಲೆಗೆ ನಿವೇಶನ ಒದಗಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ಬಿಸಿಯೂಟಕ್ಕೆ ಒದಗಿಸಲಾಗುತ್ತಿರುವ ಗ್ಯಾಸ್ ಸಾಕಾಗುತ್ತಿಲ್ಲ ಮತ್ತು ಸರಿಯಾದ ವೇಳೆಗೆ ಅಡುಗೆ ಸಿಲಿಂಡರ್‌ ಗಳನ್ನು ಸರಬರಾಜು ಮಾಡಲಾಗುತ್ತಿಲ್ಲವೆಂಬ ದೂರು ಇದ್ದು ಸರಿಪಡಿಸಲು ಕೋರಲಾಗುವುದು. ಮಕ್ಕಳ ಗ್ರಾಮಸಭೆ ನಡೆಸಿ ಮಕ್ಕಳ ಅವಶ್ಯಕತೆಗಳನ್ನು ಆಲಿಸಿ ಬೇಕಾದ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದರು.

ಅಂಗನವಾಡಿ ಕೇಂದ್ರಗಳಲ್ಲಿ ಬಿಸ್ಕೆಟ್ ವಿತರಣೆ, ರೈತರು ಬೆಳೆದ ತರಕಾರಿ ಮತ್ತಿತರ ವಸ್ತುಗಳನ್ನು ಅಂಗನವಾಡಿ ಕೇಮದ್ರಗಳಲ್ಲಿ ಇಡಲಾಗಿರುವ ಅಕ್ಷಯಪಾತ್ರೆಯಲ್ಲಿ ಹಾಕುವ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಅಂಬೇಡ್ಕರ್ ಭವನಗಳನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು, ಜೆ.ವೆಂಕಟಾಪುರ ಗ್ರಾಮದಲ್ಲಿ ಅಂಗನವಾಡಿ ಕೇಮದ್ರಗಳಿಗೆ ಕಟ್ಟಡ ನಿರ್ಮಾಣ ಕಾರ್ಯವನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 74 ಸ್ತ್ರೀಶಕ್ತಿ ಗುಂಪುಗಳಿದ್ದು ಅವರಿಗೆ ಸುಗಟೂರು, ಜೆ.ವೆಂಕಪಟಾಪುರದಲ್ಲಿ ಅಗತ್ಯ ಸ್ತ್ರೀಶಕ್ತಿ ಭವನ ನಿರ್ಮಾಣ, ಮಳಿಗೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು, ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ಗುಡಿಸಲು ಮುಕ್ತವಾಗಿಸಿ, ಅಗತ್ಯವುಳ್ಳವರಿಗೆ ಮನೆ ನಿರ್ಮಾಣ ಮಾಡಲು ಎಲ್ಲಾ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಂಥಾಲಯದಲ್ಲಿ ಸದಸ್ಯತ್ವವನ್ನು ವೃದ್ಧಿಸಿ ಅಗತ್ಯ ಮ್ಯಾಗಜೀನ್, ವೃತ್ತಪತ್ರಿಕೆಗಳನ್ನು ಒದಗಿಸಲಾಗುವುದು. ಶಾಲಾಮಕ್ಕಳಲ್ಲಿ ಓದುವ ಹವ್ಯಾಸವನ್ನು ವೃದ್ಧಿಸಲು ಕನಿಷ್ಟ ವಾರದಲ್ಲೊಮ್ಮೆಯಾದರೂ ಗ್ರಂಥಾಲಯಕ್ಕೆ ಕರೆದುತಂದು ಓದಲು ಅವಕಾಶಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿ.ಆರ್‌.ಪಿ ರಮೇಶ್‌ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಿಕೊಂಡು ಹಾಜರಾತಿ ಕಾಯ್ದುಕೊಳ್ಳುವುದು. ಶೈಕ್ಷಣಿಕ ಗುಣಮಟ್ಟ ಉತ್ತಮಗೊಳಿಸಿ ಕಲಿಕೆಯಲ್ಲಿ ವಿಶೇಷ ನಾವೀನ್ಯಯುತ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು, ಪೌಷ್ಟಿಕಾಂಶ ಕೊರತೆ ಕಾಡದಂತೆ ಕಾಯ್ದುಕೊಳ್ಳುವುದು, ಆಗಿಂದಾಗ್ಗೆ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಬೇಕಾದವರಿಗೆ ಸಹಾಯಮಾಡುವುದು, ಮೂಲಭೂತಸೌಕರ್ಯಗಳನ್ನು ಸಾಕಷ್ಟು ಒದಗಿಸುವುದು, ಉಚಿತವಾಗಿ ದೊರೆಯುವ ಸಮವಸ್ತ್ರ, ಪಠ್ಯಪುಸ್ತಕ ದಾನಿಗಳಿಂದ ನೋಟ್‌ಪುಸ್ತಕ ಮತ್ತಿತರ ಸವಲತ್ತುಗಳನ್ನು ವಿತರಿಸುವುದು, ವಿದ್ಯಾರ್ಥಿವೇತನಕ್ಕೆ ಪ್ರತಿಶತ ಎಲ್ಲರೂ ಅರ್ಜಿಸಲ್ಲಿಸುವಂತೆ ತಿಳಿಸುವುದು, ಶೌಚಾಲಯಗಳ ಸಮರ್ಪಕ ಬಳಕೆ ಮತ್ತು ಆರೋಗ್ಯ, ನೈರ್ಮಲ್ಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು, ಎಸ್‌ಡಿಎಂಸಿ ರಚನೆ, ಅಡುಗೆ ಸಿಬ್ಬಂದಿಯವರ ಬೇಡಿಕೆಗಳ ಈಡೇರಿಕೆ, ರಾಷ್ಟ್ರೀಯ ಹಬ್ಬಗಳು ಮತ್ತು ಸಹಪಠ್ಯ ಚಟುವಟಿಕೆಗಳ ಆಚರಣೆ ಮತ್ತಿತರ ವಿಷಯಗಳನ್ನು ಚರ್ಚಿಸಿದರು.

ಆರೋಗ್ಯ ಇಲಾಖೆಯ ಆಶಾ ಮಾತನಾಡಿ, ಡೆಂಗ್ಯು ಜ್ವರ ಬಾಧಿತರ ಸಂಖ್ಯೆ ಹೆಚ್ಚುತ್ತಿದ್ದು ಗ್ರಾಮಗಳಲ್ಲಿ ಡೆಂಗ್ಯು ತಡೆಗೆ ಗ್ರಾಮಪಡೆಗಳನ್ನು ರಚಿಸಿ ಜಾಗೃತಿ ಮೂಡಿಸುವುದು, ನೈರ್ಮಲ್ಯ ಕ್ರಮಕೈಗೊಳ್ಳಲು ತಿಳಿಸಿದರು.

ರೇಷ್ಮೆ ಇಲಾಖೆಯ ನಿರೀಕ್ಷಕ ಮಂಜುನಾಥ್, ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಜಿ.ಕೆ.ರವಿ ಅವರು ರೈತರಿಗೆ ಸಿಗಬಹುದಾದ ಸವಲತ್ತುಗಳ ಬಗ್ಗೆ ಇಲ್ಲಿನವರೆಗಿನ ಟಾರ್ಗೆಟ್ ಕುರಿತು ಅಂಕಿಅಂಶಗಳನ್ನು ಹಂಚಿಕೊಂಡರು. ಗ್ರಾಮೀಣ ಮತ್ತು ಕುಡಿಯುವ ನೀರು ಇಲಾಖೆಯ ಸಹಾಯಕ ಅಭಿಯಂತರ ಶ್ರೇಯಸ್ ಮಾತನಾಡಿದರು.

ಗ್ರಾಮಪಂಚಾಯಿತಿ ಕಾರ್ಯದರ್ಶಿ ವೆಂಕಟರೆಡ್ಡಿ, ಗ್ರಾಮಪಂಚಾಯಿತಿ ಸದಸ್ಯ ಸತೀಶ್‌ಕುಮಾರ್, ಬಳುವನಹಳ್ಳಿ ನಾರಾಯಣಸ್ವಾಮಿ, ತಿರುಪಳಪ್ಪ, ನಯನಾ ಹರೀಶ್, ಸುರೇಶ್, ಶಿವರಾಮಕೃಷ್ಣೇಗೌಡ, ಶಶಿಕಲಾ, ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಜೆ.ವೆಂಕಟಾಪುರ ಶಾಲೆಯ ಗೀತಾ, ಬೈರಸಂದ್ರ ಶಾಲೆಯ ನಾರಾಯಣಸ್ವಾಮಿ, ಬಳುವನಹಳ್ಳಿಯ ಶಾಲೆಯ ವೇದಾವತಿ, ಸುಗಟೂರು ದೇವರಾಜು, ಬೆಸ್ಕಾಂ, ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಶಿಕ್ಷಕಿಯರು, ಸ್ತ್ರೀಶಕ್ತಿಗುಂಪುಗಳ ಮುಖ್ಯಸ್ಥರು, ಜೆಜೆಎಂ ಗುತ್ತಿಗೆದಾರರು, ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!