Sidlaghatta : ಶಿಡ್ಲಘಟ್ಟ ನಗರದಲ್ಲಿ ಸೋಮವಾರ ಊರ ಹಬ್ಬ ಊರ ಜಾತ್ರೆಯನ್ನು ಆಚರಿಸುತ್ತಿದ್ದು ನಗರದಲ್ಲಿನ ಎಲ್ಲ ದೇವರುಗಳಿಗೂ ತಂಬಿಟ್ಟಿನ ದೀಪದ ಆರತಿ ಬೆಳಗಿ ಪೂಜಿಸಲಾಯಿತು. ಊರ ಜಾತ್ರೆಗಾಗಿ ಇಡೀ ಊರಿಗೆ ಊರೆ ಸಿಂಗಾರಗೊಂಡಿದೆ.
ಶಿಡ್ಲಘಟ್ಟದಲ್ಲಿ ಕಳೆದ ಹಲವು ವರ್ಷಗಳ ನಂತರ ಇಡೀ ನಗರದಲ್ಲಿನ ಎಲ್ಲರೂ ಒಟ್ಟಿಗೆ ಸೇರಿ ಊರ ಜಾತ್ರೆಯನ್ನು ಆಚರಿಸುತ್ತಿದ್ದು ನಗರದಲ್ಲಿನ ಎಲ್ಲ ದೇವಾಲಯಗಳಲ್ಲೂ ಗಂಟೆಯ ಸದ್ದು ಕೇಳುತ್ತಿದೆ ದೇವರ ನಾಮದ ಸ್ಮರಣೆ ಝೇಂಕರಿಸುತ್ತಿದೆ.
ಸಿಂಗಾರಗೊಂಡ ಹೆಂಗೆಳೆಯರು, ಮುತ್ತೈದೆಯರು ತಲೆ ಮೇಲೆ ತಂಬಿಟ್ಟಿದ ದೀಪವನ್ನೊತ್ತು ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಊರ ದೇವರುಗಳ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿ ತಂಬಿಟ್ಟಿನ ದೀಪದ ಆರತಿ ಬೆಳಗಿದರು.
ನಾನಾ ಹೂಗಳಿಂದ ಸಿಂಗರಿಸಿದ ತಂಬಿಟ್ಟಿನ ದೀಪದ ಆರತಿ, ಅದರ ಮೇಲೆ ಕೇಳಿದ ಎಲ್ಲವನ್ನೂ ಕರುಣಿಸುವ ವರಮಹಾಲಕ್ಷ್ಮಿಯ ಚಿತ್ರ, ಗಣೇಶನ ಚಿತ್ರ ಸೇರಿ ನಾನಾ ರೂಪದ ದೇವತೆಗಳ ಚಿತ್ರಗಳನ್ನೊಳಗೊಂಡ ದೀಪಗಳು ಗಮನ ಸೆಳೆದವು.
ಕೀಲು ಕುದುರೆ, ಗಾರುಡಿ ಗೊಂಬೆ, ಕರಡಿ ಭೂತದ ವೇಷಗಳು, ತಮಟೆ ಇನ್ನಿತರೆ ಜನಪದ ಕಲಾ ತಂಡಗಳು ದೀಪವನ್ನೊತ್ತ ಮಹಿಳೆಯರ ನಗರ ಪ್ರದಕ್ಷಿಣಿಗೆ ಇನ್ನಷ್ಟು ಮೆರಗನ್ನು ನೀಡಿದವು. ಯುವಕರು ತಮಟೆಯ ಸದ್ದಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.