Sidlaghatta : ಜೆಸಿಬಿ, ಮಾಳಿಗೆಗಳ ಮೇಲೆಲ್ಲಾ ನಿಂತ ಜನರಿಂದ ಹೂಮಳೆ, ಪೂರ್ಣಕುಂಭ ಸ್ವಾಗತ. ಕ್ರೇನ್‌ಗಳಲ್ಲಿ ದೊಡ್ಡ ಗಾತ್ರದ ಹೂವಿನ ಮತ್ತು ಸೇಬಿನ ಮಾಲಾರ್ಪಣೆ, ರೇಷ್ಮೆ ಗೂಡಿನ ಹಾರ, ಜೊತೆಗೆ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ…
ಚುನಾವಣಾ ಪೂರ್ವಭಾಗಿಯಾಗಿ ಎಚ್.ಡಿ.ಕುಮಾರಸ್ವಾಮಿ (H D Kumaraswamy) ನೇತೃತ್ವದಲ್ಲಿ ನಡೆಯುತ್ತಿರುವ JDSನ ಮಹತ್ವಾಕಾಂಕ್ಷಿ ಪಂಚರತ್ನ ರಥಯಾತ್ರೆಯ ಝಲಕ್ ಇದು.
ಶಿಡ್ಲಘಟ್ಟ ತಾಲ್ಲೂಕಿನ ಹುಣಸೇನಹಳ್ಳಿ ಸ್ಟೇಷನ್ ಬಳಿ ವಿಶೇಷ ಪೂಜೆ ನಡೆಸುವುದರೊಂದಿಗೆ ಶಿಡ್ಲಘಟ್ಟ ವಿಧಾನಸಭಾ ವ್ಯಾಪ್ತಿಯಲ್ಲಿ ಪಂಚರತ್ನ ರಥಕ್ಕೆ ಚಾಲನೆ ನೀಡಲಾಯಿತು. ಪಂಚರತ್ನ ಯೋಜನೆ ಕುರಿತ ಕಿರು ನಾಟಕವನ್ನೂ ಪ್ರದರ್ಶಿಸಲಾಯಿತು. ಹೋದಲೆಲ್ಲಾ ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿ ಪುಷ್ಪಾರ್ಚನೆ ಮಾಡಿದರು. ದೇವರಮಳ್ಳೂರು ಪಂಚಾಯಿತಿ ವ್ಯಾಪ್ತಿಯಿಂದ ನಗರದ ಮಯೂರ ವೃತ್ತದ ಮುಖಾಂತರ ಬಸ್ ನಿಲ್ದಾಣದವರೆಗೂ ಮೆರವಣಿಗೆ ಮಾಡಲಾಯಿತು.
ಬಸ್ ನಿಲ್ದಾಣದ ಬಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದರು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಆದ್ರೆ ಅದನ್ನ ಒಡೆಯುವ ಕೆಲಸ ಮಾಡಲಾಗುತ್ತಿದೆ. ನಿಮ್ಮ ಜೀವನದ ಉತ್ತಮ ಭವಿಷ್ಯ ಬೆಳಗಬೇಕು. ರೈತ, ಮುಸ್ಲಿಂ, ಹಿಂದೂಗಳ ಕುಟುಂಬದ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಉತ್ತಮ ಆಗಬೇಕು. ಅದನ್ನ ಜೆಡಿಎಸ್‌ಗೆ ಮತ ನೀಡುವ ಮೂಲಕ ಕಾರ್ಯಗತಗೊಳಿಸಲು ಸಹಕಾರ ನೀಡಿ ಎಂದರು.
ಎಲ್ಲಾ ಸಮಸ್ಯೆ ಬಗೆಹರಿಸಬೇಕು ಅನ್ನೋದೆ ನಮ್ಮ ಪಕ್ಷದ ಉದ್ದೇಶ. 2018ರಲ್ಲಿ ಸಾಲ ಮನ್ನ ಮಾಡುವ ಕೆಲಸ ಮಾಡಿದೆ. ಅಧಿಕಾರದಲ್ಲಿದ್ದ ಕೇವಲ 14 ತಿಂಗಳಲ್ಲಿ ರೈತರ ಸಾಲ ಮನ್ನ ಮಾಡಿದ್ದೇವೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಮೇಲೂರು ಬಿ.ಎನ್.ರವಿಕುಮಾರ್ ನಮ್ಮ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ. ರವಿಯನ್ನು ನಿಮ್ಮ ಮನೆಯ ಅಣ್ಣ, ತಮ್ಮನಾಗಿ ನೋಡಿ ಅವರಿಗೆ ಮತ ನೀಡಿ ಎಂದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮರೆಯಾಗುತ್ತಿದೆ. ಇಂದು ಶಿಡ್ಲಘಟ್ಟದಲ್ಲಿ ಹಬ್ಬದ ವಾತಾವರಣ ಮೂಡಿದೆ. ಪಂಚರತ್ನ ಯೋಜನೆ ಐದು ವರ್ಷಗಳಲ್ಲಿ ಮಾಡದಿದ್ರೆ ನಿಮ್ಮ ಬಳಿ ಬಂದು ಮತ್ತೆ ಮತ ಕೇಳಲ್ಲ. ಸಾಲ ಮನ್ನಾ ಮಾಡಬಾರದು ಅಂತ ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ರು. ಎಲ್ಲಿ ಸಾಲ ಮನ್ನ ಮಾಡಿ ಹೆಸರು ಮಾಡ್ತಾರೆ ಅಂತ ಸಿದ್ದರಾಮಯ್ಯಗೆ ಹೊಟ್ಟೆ ಕಿಚ್ಚು. ರೈತಾಪಿ ವರ್ಗಕ್ಕೆ ದೇವೇಗೌಡರು ನೀಡಿದ ಕೊಡುಗೆ ಅಪಾರ.
ಕೆಂಪೇಗೌಡರ ಪುತ್ಥಳಿ ಏರ್ಪೋರ್ಟ್‌ನಲ್ಲಿ ಅಲ್ಲ, ವಿಧಾನಸೌಧದ ಮುಂಭಾಗದಲ್ಲಿ ಮಾಡುತ್ತೇವೆ. ಕೆಂಪೇಗೌಡ ಯೂನಿವರ್ಸಿಟಿ ಹಾಗೂ ಟಿಪ್ಪು ಯೂನಿವರ್ಸಿಟಿ ಮಾಡುತ್ತೇವೆ. ಈ ಮೂಲಕ ಸರ್ವಜನಾಂಗದ ಶಾಂತಿಯ ತೋಟ ಮಾಡ್ತೀವಿ ಎಂದರು.