Sidlaghatta : “ದಾಸಶ್ರೇಷ್ಠ ಶ್ರೀ ಕನಕದಾಸರ ಜೀವನವನ್ನು ಅರಿತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ನಮಗೆ ಸಾರಿ ಸಹಾಯಕವಾಗುತ್ತದೆ” ಎಂದು ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಾದ ಶ್ರೀ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರು ಕೇವಲ ಕುರುಬ ಸಮುದಾಯಕ್ಕಷ್ಟೇ ಸೀಮಿತ ವ್ಯಕ್ತಿ ಅಲ್ಲ. 15-16ನೇ ಶತಮಾನದಲ್ಲಿಯೇ ಜಾತಿ ಭೇದಗಳ ವಿರುದ್ಧ ಸಮರ ಸಾರಿದ ಮಹಾನ್ ಭಕ್ತರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕರು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳ ಗೌರವ
ಕುರುಬ ಸಮುದಾಯದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಯಿತು. ಜಯಪ್ರಕಾಶ್ ನಾರಾಯಣ್ ಮತ್ತು ಎಚ್.ಡಿ. ದೇವೇಗೌಡ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ತಲಾ ₹5000 ಪ್ರೋತ್ಸಾಹ ಧನ ನೀಡಲಾಯಿತು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಮೇಲೂರು ಮಂಜುನಾಥ ಅವರು ಕನಕದಾಸರ ಜೀವನದ ಮಹತ್ವ ಕುರಿತು ಮಾತನಾಡಿದರು. ತಹಶೀಲ್ದಾರ್ ಬಿ.ಎನ್. ಸ್ವಾಮಿ, ಕುರುಬರ ಸಂಘದ ಅಧ್ಯಕ್ಷ ಕೆ. ಮಂಜುನಾಥ್, ಕಾರ್ಯದರ್ಶಿ ಎಂ. ರಾಮಾಂಜಿ, ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮತ್ತು ಇನ್ನಿತರ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೇಲೂರು ಗ್ರಾಮಪಂಚಾಯಿತಿ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮಪಂಚಾಯಿತಿಯಲ್ಲಿ ದಾಸ ಶ್ರೇಷ್ಠ ಸಂತಕವಿ ಭಕ್ತ ಕನಕದಾಸರ 525 ನೇ ಜಯಂತಿಯನ್ನು ಆಚರಿಸಲಾಯಿತು. ಗ್ರಾಮಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಎಂ. ಶಿವಾನಂದ್, ಸದಸ್ಯರಾದ ಆರ್.ಎ.ಉಮೇಶ್, ಎಂ.ಕೆ. ರವಿಪ್ರಸಾದ್. ದೇವರಾಜ್, ಭಾಗ್ಯಮ್ಮ,ಬಚೇಗೌಡ, ಪಿ.ಡಿ.ಒ ಶಾರದಾ, ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ಸಿಬ್ಬಂದಿ ಹಾಜರಿದ್ದರು