![](https://www.sidlaghatta.com/wp-content/uploads/2022/07/28JuSd02b.jpg)
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಂಡ್ರಹಳ್ಳಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕಸಾಪ (Kannada Sahitya Parishat) ವತಿಯಿಂದ ಆಯೋಜಿಸಿದ್ದ “ಅಚ್ಚ ಕನ್ನಡ – ಸ್ವಚ್ಚ ಕನ್ನಡ” ಸ್ಪರ್ಧೆಯಲ್ಲಿ (Competition) ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಿ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕನ್ನಡ ಶಬ್ದಗಳನ್ನು ಬಿತ್ತುವ ಕೆಲಸ ಆಗಬೇಕು. ಮುಂದೆ ಅವು ಉತ್ತಮ ಫಲವನ್ನು ನೀಡುತ್ತವೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ನಮ್ಮ ಸಂಸ್ಕೃತಿಯ ಜೊತೆಗೆ ನಮ್ಮ ಮಾತೃಭಾಷೆ ಸಹ ಕಲುಷಿತಗೊಂಡು ನೈಜತೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಚ್ಚ ಕನ್ನಡದಲ್ಲಿ ತಪ್ಪಿಲ್ಲದೇ ಮಾತಾಡುವ ಮೂಲಕ ಮತ್ತು ತಪ್ಪಿಲ್ಲದೇ ಕನ್ನಡ ಪದಗಳನ್ನು ಬರೆಯುವ ಮೂಲಕ ನಮ್ಮ ಕನ್ನಡ ಭಾಷೆಯ ಪಾವಿತ್ರ್ಯತತೆಯನ್ನು ಎತ್ತಿಹಿಡಿದಿರುವುದು ಸಂತಸವಾಗಿದೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಅಮೃತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಒಂದೇ ಒಂದು ಅನ್ಯಭಾಷೆಯ ಪದವನ್ನು ಬಳಸದೆ ಪರಿಸರ, ಕನ್ನಡ ಸಾಹಿತ್ಯ, ಇತಿಹಾಸ, ಭಾಷೆ, ಕವಿಗಳು, ಕಲೆ ಮುಂತಾದ ವಿಷಯಗಳ ಬಗ್ಗೆ ಮಾತಾಡಿದ್ದಾರೆ. ವಿದ್ಯಾರ್ಥಿಗಳಿಗೆ ಅಚ್ಚ ಕನ್ನಡ – ಸ್ವಚ್ಚ ಕನ್ನಡ ಸ್ಪರ್ಧೆಯನ್ನು ಏರ್ಪಡಿಸಿ ತಪ್ಪಿಲ್ಲದೇ ಬರೆಯುವುದು ಮತ್ತು ಅನ್ಯ ಭಾಷೆಯ ಪ್ರಯೋಗ ವಿಲ್ಲದೆ ಕನ್ನಡ ಭಾಷೆಯನ್ನು ಮಾತಾಡಿಸಿದ ತಾಲ್ಲೂಕು ಕಸಾಪ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮವನ್ನು ಜಾಗೃತಗೊಳಿಸುತ್ತಿದೆ. ಇದು ಇತರರಿಗೂ ಮಾದರಿಯಾಗಲಿ ಎಂದರು.
ಅಚ್ಚ ಕನ್ನಡ – ಸ್ವಚ್ಚ ಕನ್ನಡ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ 10 ನೇ ತರಗತಿಯ ಬಿ.ಕೆ.ವಿನೋದ್ ಕುಮಾರ್ (ಪ್ರಥಮ), ಎಸ್.ಚಂದನ (ದ್ವೀತಿಯ), ಕೆ.ಆರ್.ದಕ್ಷಿತ್ (ತೃತೀಯ) ;9 ನೇ ತರಗತಿಯ ಬಿ.ವಿ.ವಿದ್ಯಾಶ್ರೀ (ಪ್ರಥಮ), ವಿ.ಶರಣ್ಯ (ದ್ವಿತೀಯ), ಎಂ.ಸ್ವಾತಿ (ತೃತೀಯ) ಅವರುಗಳಿಗೆ ಕಸಾಪ ವತಿಯಿಂದ ಬಹುಮಾನವಾಗಿ “ಮೆಲುಕು” ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಕೆ.ಮಂಜುನಾಥ್, ಜಿಲ್ಲಾ ಕಸಾಪ ಪದಾಧಿಕಾರಿ ಎಸ್. ಸತೀಶ್, ಸಾಹಿತಿ ಚಂದ್ರಶೇಖರ ಹಡಪದ್, ಪ್ರಾಂಶುಪಾಲ ಮೂರ್ತಪ್ಪ, ಶಿಕ್ಷಕರಾದ ವಿ. ಮಂಜುನಾಥ್, ನಮ್ರತ, ವೆಂಕಟಸ್ವಾಮಿ, ರಾಘವೇಂದ್ರ, ಎ. ಮಂಜುನಾಥ್, ಆನಂದ, ಶಿವಚಂದ್ರಕುಮಾರ್, ಲಕ್ಷ್ಮೀ, ತೇಜಸ್ವಿನಿ, ಗಂಗಾಧರ್, ಸರಳ, ಅನೂಷ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.