
ಕನ್ನಡ ಸಾಹಿತ್ಯ ಸಮ್ಮೇಳನವು ಸಕಲರನ್ನೂ ಒಳಗೊಂಡಂತೆ ಅರ್ಥಪೂರ್ಣವಾಗಿ ನಡೆಯಬೇಕು. ಅದಕ್ಕೆ ಎಲ್ಲರೂ ಪಕ್ಷ, ಜಾತಿ ಧರ್ಮವನ್ನು ಮೀರಿ ಕೈ ಜೋಡಿಸಬೇಕೆಂದು ಶಾಸಕ ಬಿ.ಎನ್. ರವಿಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದರು.
ತಾಲ್ಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ರೂಪಸಿ ರಮೇಶ್ ಅವರ ನಿವಾಸಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ಪದಾಧಿಕಾರಿಗಳೊಂದಿಗೆ ತೆರಳಿ ವೀಳ್ಯ ನೀಡಿ ಆಹ್ವಾನಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಾತಿ ಧರ್ಮ ಪಕ್ಷವನ್ನು ಮೀರಿ ಎಲ್ಲರನ್ನೂ ಒಳಗೊಂಡಂತೆ ಕನ್ನಡದ ಕೈಂಕರ್ಯಗಳನ್ನು ನಡೆಸಿಕೊಂಡು ಕನ್ನಡ ನಾಡು ನುಡಿ ಭಾಷೆಯ ಪರವಾದ ಚಟುವಟಿಕೆಗಳ ಮೂಲಕ ಕನ್ನಡಿಗರ ಬದುಕನ್ನು ಕಟ್ಟುವ ಕೆಲಸವನ್ನು ಮಾಡಬೇಕು ಎಂದರು
ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಆಗಿರುವ ರೂಪಸಿ ರಮೇಶ್ ಅವರು ಮಾತನಾಡಿ, ಹಲವಾರು ವರ್ಷಗಳ ನನ್ನ ಹೋರಾಟದ ಬದುಕಿಗೆ ಅರ್ಥ ಸಿಕ್ಕ ದಿನ ಇದಾಗಿದೆ. ನನ್ನ ಮೇಲೆ ನಂಬಿಕೆ ವಿಶ್ವಾಸವಿಟ್ಟು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲ ಕನ್ನಡದ ಬಂಧುಗಳಿಗೆ ಅಭಾರಿಯಾಗಿದ್ದೇನೆ ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾದೂರು ರಘು, ಕಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಟಿ.ಟಿ.ನರಸಿಂಹಪ್ಪ, ಎಂ.ಕೆಂಪಣ್ಣ, ಎಚ್.ಕೆ.ಸುರೇಶ್, ಮನೋಹರ್, ಈಧರೆ ಪ್ರಕಾಶ್, ಸುಂದರಾಚಾರಿ, ಕೃ.ನಾ.ಶ್ರೀನಿವಾಸಮೂರ್ತಿ ಹಾಜರಿದ್ದರು.