Sidlaghatta : ಕರ್ನಾಟಕ ರಾಜ್ಯ ರೈತ ಸಂಘ (Karnataka Rajya Raita Sangha) ಹಾಗೂ ಹಸಿರು ಸೇನೆ (Hasiru Sene) ಸದಸ್ಯರು ಮಂಗಳವಾರ ಕೋಲಾರದ ಕೋಚಿಮುಲ್ (KOCHIMUL) ಒಕ್ಕೂಟದ ಮುಂಭಾಗ ನಡೆಯಲಿರುವ ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆಯಲ್ಲಿ (Protest) ಪಾಲ್ಗೊಳ್ಳಲು ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಈಗ ರೈತರಿಗೆ ಹಾಲಿನ ದರದಲ್ಲಿ 29 ರೂಪಾಯಿಂದ ಈಗ ಕೇವಲ 24 ರೂಗಳಿಗೆ ಇಳಿಸಿರುವುದು ರೈತರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ಉತ್ಪಾದಕರಿಗೆ ಕನಿಷ್ಟ 30 ರಿಂದ 35 ರೂ 1 ಲೀಟರಿಗೆ ದರ ನಿಗದಿಪಡಿಸಬೇಕು. ಒಕ್ಕೂಟದ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು.ಒಕ್ಕೂಟದ ಮೂಲ ಭೂತ ಸೌಕರ್ಯಗಳಿಗೆ ಲೀಟರಿಗೆ 1.55 ರೂಪಾಯಿ ಕಡಿತಗೊಳಿಸುವುದನ್ನು ನಿಲ್ಲಿಸಬೇಕು. ರಾಜ್ಯದಾದ್ಯಂತ ರೈತರಿಗೆ ಏಕ ರೂಪದಲ್ಲಿ ಹಾಲಿನ ದರ ನಿಗದಿಪಡಿಸಬೇಕು. ಪಶು ಆಹಾರ ದರವನ್ನು ಕಡಿತಗೊಳಿಸಬೇಕು ಮತ್ತು ಉತ್ತಮ ಗುಣಮಟ್ಟ ಕಾಪಾಡಬೇಕು. ಉತ್ತಮ ತಳಿಯ ಕೃತಕ ಗರ್ಭಧಾರಣೆ ಗುಣಮಟ್ಟ ಕಾಪಾಡಬೇಕು. 15 ಕಿ.ಮೀ ಒಳಗೆ ಬರುವ ಬಿ.ಎಂ.ಸಿ.ಗಳನ್ನು ರದ್ದುಗೊಳಿಸಬೇಕು. BMC ನಲ್ಲಿ ಆಗುವ ಗುಣಮಟ್ಟದ ತಾರತಮ್ಯವನ್ನು ಸರಿಪಡಿಸಬೇಕು. ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಒಕ್ಕೂಟದ ವತಿಯಿಂದ ವೇತನ ನೀಡಬೇಕು. ಕಡಿಮೆ (SNF) ಗುಣಮಟ್ಟ ಎಂದು ಪರಿಗಣಿಸಿ ದಂಡ ವಿಧಿಸುವುದನ್ನು ನಿಲ್ಲಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟಿಸಲಾಗುತ್ತಿದೆ ಎಂದು ಹೇಳಿದರು.
ರೈತ ಸಂಘದ ಮುನಿನಂಜಪ್ಪ, ಕೆಂಪರೆಡ್ಡಿ, ಕೆಂಪಣ್ಣ, ಮಂಜುನಾಥ, ರಾಮಣ್ಣ, ತಮ್ಮಣ್ಣ ಹಾಜರಿದ್ದರು.