Sidlaghatta : ಸರ್ಕಾರದ ವಿವಿಧ ಸವಲತ್ತುಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ರಾಜ್ಯಾದ್ಯಂತ ಇಂದು “ಕಂದಾಯ ದಾಖಲೆಗಳು ಮನೆ ಬಾಗಿಲಿಗೆ” (Revenue Documents to Your Doorstep) ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ವಿ.ಮುನಿಯಪ್ಪ (V Muniyappa) ಹೇಳಿದರು.
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆಯಿಂದ ಆಯೋಜಿಸಲಾಗಿದ್ದ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಇರುವ ಎಲ್ಲರೂ ತಾಲ್ಲೂಕು ಕಚೇರಿಗೆ ತಮ್ಮ ತಮ್ಮ ಕೆಲಸಗಳ ನಿಮಿತ್ತ ಅಲೆಯುತ್ತಾ ಹೋದರೆ ಯಾರ ಕೆಲಸಗಳು ಆಗುವುದಿಲ್ಲ. ಅಧಿಕಾರಿಗಳಿಗೆ ಹೆಚ್ಚಿನ ಕೆಲಸದ ಒತ್ತಡಗಳು ಇರುವುದರಿಂದ ಯಾರೂ ಇನ್ನು ಮುಂದೆ ಕಚೇರಿಗೆ ಅಲೆಯುವಂತಿಲ್ಲ. ನಿಮ್ಮ ಅಗತ್ಯ ಕಂದಾಯ ದಾಖಲೆಗಳಾದ ಫಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತದೆ. ಮುಂಬರುವ ಆರು ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಎಲ್ಲರಿಗೂ ಕಂದಾಯ ದಾಖಲೆಗಳು ಮನೆ ಬಾಗಿಲಿಗೆ ತಲುಪಿಸುವ ಕೆಲಸ ತಹಶೀಲ್ದಾರ್ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳು ಮಾಡಲಿದ್ದಾರೆ ಎಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ತಾಲ್ಲೂಕಿನಾದ್ಯಂತ ಇರುವ ಪ್ರತಿಯೊಂದು ಮನೆಗೂ ಅಗತ್ಯ ಕಂದಾಯ ದಾಖಲೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುವುದು. ಇನ್ನು ತಮಗೆ ನೀಡಿದ ದಾಖಲೆಗಳಲ್ಲಿ ಏನಾದರೂ ಕುಂದು ಕೊರತೆಯಿದ್ದಲ್ಲಿ ಅಗತ್ಯ ದಾಖಲೆಗಳನ್ನು ಪಡೆದು ಸರಿ ಪಡಿಸಲಾಗುವದು ಎಂದರು.
ಇದೇ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿ ಒಂದು ವರ್ಷ ಕಳೆದಿದ್ದು, ಗ್ರಾಮದ ಬಹುತೇಕ ಸಮಸ್ಯೆಗಳು ಪರಿಹಾರವಾಗಿವೆ. ಗ್ರಾಮದ ರಾಜಕಾಲುವೆಗಳ ತೆರವು ಸೇರಿದಂತೆ ಗ್ರಾಮದ ಸ್ಮಶಾನ ಹಾಗೂ ಗುಂಡುತೋಪು ಅಭಿವೃದ್ಧಿಯಂತಹ ಕೆಲಸಗಳು ನಡೆದಿವೆ. ಒಂದೆರಡು ಕಾಲುವೆಗಳ ತೆರವು ಕಾರ್ಯ ಬಾಕಿಯಿದ್ದು ಇದೀಗ ಬೆಳ್ಳೂಟಿಯಿಂದ ಭದ್ರನಕೆರೆಯವರೆಗೂ ಕೆರೆಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಸರ್ವೇ ಮಾಡಿಸಿ ತೆರವು ಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ರಾಜಸ್ವ ನಿರೀಕ್ಷಕ ಪ್ರಶಾಂತ್, ಗ್ರಾಮ ಲೆಕ್ಕಿಗ ನಾಗರಾಜ್, ಆನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಎನ್.ವಿಜಯೇಂದ್ರ, ಸದಸ್ಯ ವೆಂಕಟೇಶ್, ಸ್ಥಳೀಯ ಮುಖಂಡರಾದ ವೆಂಕಟಸ್ವಾಮಿರೆಡ್ಡಿ, ಆಂಜಿನಪ್ಪ, ರೆಡ್ಡಣ್ಣ, ಸುರೇಶ್, ಪ್ರಭಾಕರ, ಪ್ರಕಾಶ್ ಹಾಜರಿದ್ದರು.