
Sidlaghatta : ಶಿಡ್ಲಘಟ್ಟ ನಗರ ಹಾಗೂ ತಾಲ್ಲೂಕಿನಾದ್ಯಂತ ಮಂಗಳವಾರ ಶಿವರಾತ್ರಿ (Mahashivaratri) ಆಚರಣೆ ಅಂಗವಾಗಿ ಎಲ್ಲಾ ಶಿವಾಲಯಗಳಲ್ಲೂ ಬೆಳಗ್ಗೆಯಿಂದಲೇ ರುದ್ರಾಭಿಷೇಕದೊಂದಿಗೆ ಪೂಜೆ ನಡೆಯಿತು. ಶಿವ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಎಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಭಕ್ತರು ಪಂಚಲಿಂಗಗಳಾದ ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ ಮತ್ತು ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ ಮತ್ತು ಏಕಾಂಬರೇಶ್ವರ ದೇವಾಲಯಗಳನ್ನು ದರ್ಶಿಸಿ ಎರಡು ಕಿಮೀ ದೂರವಾದರೂ ನಡೆದುಕೊಂಡೇ ವೀರಾಪುರದ ಗವಿಗಂಗಾಧರೇಶ್ವರ ಮತ್ತು ಬೂದಾಳದ ಮಲೆಮಲ್ಲೇಶ್ವರ ದೇವಾಲಯಗಳನ್ನು ಸಂದರ್ಶಿಸುತ್ತಿದ್ದುದು ವಿಶೇಷವಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸಾಯಿಬಾಬಾ ಮಂದಿರದಲ್ಲಿ ಜಲಕಂಠೇಶ್ವರಸ್ವಾಮಿ, ಶಿವರಾತ್ರಿಯಂದು ಬೆಳಗ್ಗೆ ಸೂರ್ಯಕಿರಣ ಲಿಂಗವನ್ನು ಸ್ಪರ್ಶಿಸುವ ಚೌಡಸಂದ್ರದ ಸೋಮೇಶ್ವರ ದೇಗುಲ, ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವ ರಾಮಲಿಂಗೇಶ್ವರ ಬೆಟ್ಟ, ಕುಂದಲಗುರ್ಕಿ, ದೇವರಮಳ್ಳೂರು, ಕೊತ್ತನೂರು, ಬಚ್ಚಹಳ್ಳಿ, ನಾಗಮಂಗಲ, ಯಣ್ಣಂಗೂರು, ಭಕ್ತರಹಳ್ಳಿ, ಮೇಲೂರು, ಅಪ್ಪೇಗೌಡನಹಳ್ಳಿ, ಮುತ್ತೂರು, ಹರಳಹಳ್ಳಿ ಮುಂತಾದೆಡೆ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ವಿವಿಧ ದೇಗುಲಗಳಲ್ಲಿ ಜಾಗರಣೆಯಿರುವ ಭಕ್ತಾದಿಗಳಿಗೆ ಫಲಾಹಾರ ವಿತರಣೆ, ಭಜನೆ, ಹರಿಕಥಾ ಕಾಲಕ್ಷೇಪವನ್ನು ಏರ್ಪಡಿಸಿರುವರು.
Image: Namma Sidlaghatta
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur