
Sidlaghatta : ಮಹಾರಾಷ್ಟ್ರದ MES ಪುಂಡಾಟಿಕೆ ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಶಿಡ್ಲಘಟ್ಟದಲ್ಲಿ ಸಂಪೂರ್ಣ ವಿಫಲವಾಯಿತು. ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, KSRTC ಹಾಗೂ ಖಾಸಗಿ ಬಸ್‌ಗಳ ಸಂಚಾರವೂ ಸಹಜವಾಗಿತ್ತು. ಆಟೋ ಸಂಚಾರವೂ ನಿರ್ಘಾತವಾಗಿದ್ದು, ಜನಜೀವನ ಸಾಮಾನ್ಯವಾಗಿತ್ತು.
ಕನ್ನಡಪರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಸಾರಿಗೆ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಕಾಲ್ನಡಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರದ ಗಡಿಭಾಗದಲ್ಲಿ ಕನ್ನಡಿಗರು ಮತ್ತು ಸಾರಿಗೆ ಬಸ್‌ಗಳ ಚಾಲಕರು, ನಿರ್ವಾಹಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ಅವಮಾನವನ್ನು ಖಂಡಿಸಿ ಎಂ.ಇ.ಎಸ್. ಪುಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು.
ತಾಲ್ಲೂಕು ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು, ಎಂ.ಇ.ಎಸ್. ಪುಂಡರ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಒಕ್ಕೂಟದ ಮುಖ್ಯಸ್ಥ ರಾಮಾಂಜನೇಯ ಆಕ್ರೋಶ ವ್ಯಕ್ತಪಡಿಸಿದರು. “ಕನ್ನಡಿಗರ ತಾಳ್ಮೆ ಹಾಗೂ ಸಹನೆಯನ್ನು ದೌರ್ಬಲ್ಯ ಎಂದು ನಿರ್ಧರಿಸುವುದು ಎಂ.ಇ.ಎಸ್. ಪುಂಡರ ಶತಮೂರ್ಖತನ. ಕನ್ನಡಿಗರನ್ನು ಕೆಣಕಲು ಯತ್ನಿಸಿದರೆ, ಅದರ ಪ್ರತಿಫಲ ತಪ್ಪದೇ ಎದುರಾಗಲಿದೆ” ಎಂದು ಎಚ್ಚರಿಸಿದರು.
“ನಾವು ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯಿಂದ ಜೀವನ ಸಾಗಿಸುತ್ತಿದ್ದೇವೆ. ಆದರೆ ಮಹಾರಾಷ್ಟ್ರದ ಮರಾಠಿಗರು ಹಾಗೂ ಎಂ.ಇ.ಎಸ್. ಪುಂಡರು ಇದನ್ನು ಮರೆತಿದ್ದಾರೆ. ಕರ್ನಾಟಕ ಬಂದ್ ಅನ್ನು ಶಾಂತಿಯುತವಾಗಿ ಆಚರಿಸುತ್ತಿದ್ದೇವೆ. ಆದರೆ ನಮ್ಮ ತಾಳ್ಮೆ ಹಾಗೂ ಶಾಂತಿಯ ಮನೋಭಾವವನ್ನು ಪರೀಕ್ಷಿಸಬೇಡಿ. ಇಲ್ಲವಾದರೆ ರಾಜ್ಯದ ಮೂಲೆಮೂಲೆಗಳಿಂದ ಪಾದಯಾತ್ರೆ ಮೂಲಕ ಬೆಳಗಾವಿಗೆ ಬಂದು ನಮ್ಮ ಶಕ್ತಿ ಪ್ರದರ್ಶಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾರಿಗೆ ಬಸ್ ನಿಲ್ದಾಣ ಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಲು ಮುಂದಾದಾಗ, ಪೊಲೀಸರ ತಡೆ ಎದುರಿಸಿದರು. ನಂತರ, ಕೋಟೆ ವೃತ್ತದವರೆಗೆ ಬೈಕ್ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಕಾಲ್ನಡಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ಒಂದು ಗಂಟೆ ಕಾಲ ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು.
ಈ ಪ್ರತಿಭಟನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ. ನಾರಾಯಣಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜನೇಯ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಆರ್. ಸುರೇಶ್, ಕರವೇ ಅಧ್ಯಕ್ಷ ಸುನಿಲ್, ಮಂಜುನಾಥ್, ವಸಂತ್, ವರದರಾಜ್, ವರ್ತಕರ ಸಂಘದ ಅಧ್ಯಕ್ಷ ಮಹೇಶ್, ಎಸ್.ಎಸ್. ನಾಗರಾಜ್, ಪ್ರಸಾದ್, ರೈತ ಸಂಘದ ಬೆಳ್ಳೂಟಿ ಮುನಿಕೆಂಪಣ್ಣ, ಪ್ರತೀಶ್, ಟಿಪ್ಪು ಸಂಘದ ಮೌಲಾ, ಕದಂಬ ಸೇನೆಯ ಮುನಿರಾಜು ಸೇರಿದಂತೆ ಅನೇಕ ಮಂದಿ ಹಾಜರಿದ್ದರು.