Sidlaghatta : ದಿನೇ ದಿನೇ ಪಶು ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತಿದ್ದು ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ ಹಾಗಾಗಿ ಪ್ರತಿ ಒಂದು ಲೀಟರ್ ಹಾಲಿಗೆ ಕನಿಷ್ಠ 50 ರೂ ದರ ನಿಗಧಿಪಡಿಸಲು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (Karnataka Rajya Raita Sangha) ಹಾಗು ಹಸಿರುಸೇನೆಯ (Hasiru Sene) – ಸಾಮೂಹಿಕ ನಾಯಕತ್ವ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಒತ್ತಾಯಿಸಿದರು.
ನಗರದ ಬಸ್ ನಿಲ್ದಾಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಸಾಮೂಹಿಕ ನಾಯಕತ್ವ)ಯ ಪದಾಧಿಕಾರಿಗಳೊಂದಿಗೆ ಕೆಲ ಕಾಲ ರಸ್ತೆ ತಡೆ ನಡೆಸಿ ನಂತರ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಜಿಲ್ಲೆಯಾಧ್ಯಂತ ಶೇ 90 ರಷ್ಟು ರೈತರು ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿದ್ದು, ಇತ್ತೀಚಗೆ ಪಶು ಆಹಾರ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಹೈನುಗಾರಿಕೆ ಮಾಡಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಶು ಆಹಾರ ತಯಾರಿಕೆಗೆ ಉಪಯೋಗಿಸುವ ಮುಸಕಿನಜೋಳ, ಸೋಯ, ಇತರೆ ಕಚ್ಚಾ ಆಹಾರ ಪದಾರ್ಥಗಳ ಬೆಲೆ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದರೂ ಈ ಹಿಂದೆ ಹಸುಗಳಿಗೆ ನೀಡುತ್ತಿದ್ದ ಚಕ್ಕೆಯ ಬೆಲೆ 950 ರೂಗಳಿಂದ 1300 ಕ್ಕೇರಿದೆ. ಬೂಸ ಪ್ರತಿ ಮೂಟೆ 850 ರಿಂದ 1100 ಕ್ಕೇರಿದೆ. ಫೀಡ್ ಪ್ರತಿ ಮೂಟೆ 950 ರೂ ಗಳಿಂದ 1100 ಕ್ಕೇರಿದೆಯಾದರೂ ರೈತರು ಉತ್ಪಾದಿಸುವ ಹಾಲಿನ ದರ ಮಾತ್ರ ಏರಿಕೆ ಮಾಡಿರುವುದಿಲ್ಲ.
ನೆರೆಯ ಜಿಲ್ಲೆಗಳಾದ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇದೇ ನವೆಂಬರ್ 1 ರಿಂದ 1 ಹಾಗು 2 ರೂಗಳಿಗೆ ಬೆಲೆ ಏರಿಕೆ ಮಾಡಿರುತ್ತಾರೆ. ಆದರೆ ನಮ್ಮ ಜಿಲ್ಲೆಯಲ್ಲಿ ಕೋಚಿಮುಲ್ ಅಧ್ಯಕ್ಷರು ಹಾಗೂ ಅವಳಿ ಜಿಲ್ಲೆಯ ನಿರ್ದೇಶಕರ ಸಭೆಯಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದೆ ಹಿಂದೇಟು ಹಾಕುತ್ತಿರುವುದು ಅವಳಿ ಜಿಲ್ಲೆಯ ರೈತರಿಗೆ ಮಾಡಿದ ಮೋಸ. ಹಾಗಾಗಿ ರೈತರ ಪ್ರತಿ ಲೀ ಹಾಲಿಗೆ 50 ರೂ ನಿಗಧಿಪಡಿಸುವುದು ಸೇರಿದಂತೆ ಜಿಲ್ಲಾ ಆಡಳಿತ ಅಧಿಕಾರಿಗಳ ಮುಖಾಂತರ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಂಡಳಿಗೆ ಪಶು ಆಹಾರದ ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಲು ಕ್ರಮ ವಹಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೋಚಿಮುಲ್ ಮೆಗಾ ಡೈರಿ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕ ಎ.ವಿ.ಶಂಕರರೆಡ್ಡಿ ಮೂಲಕ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಡಿ.ವಿ.ನಾರಾಯಣಸ್ವಾಮಿ, ಮುನಿಯಪ್ಪ, ಜಿ.ಎನ್.ವಿ.ಬಾಬು, ಪ್ರಕಾಶ್, ಬಿ.ಆರ್.ಪ್ರಸಾದ್, ವೆಂಕಟರೆಡ್ಡಿ, ಹರೀಶ್, ಅಶ್ವತ್ಥಪ್ಪ ಹಾಜರಿದ್ದರು.