Sidlaghatta : ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಅವರನ್ನು ಒಳಗೊಂಡ ರೈತ ಸಂಘದ ಸದಸ್ಯರ ನಿಯೋಗ ರೇಷ್ಮೆ ಆಯುಕ್ತ ಪೆದ್ದಯ್ಯ ಅವರನ್ನು ಭೇಟಿ ಮಾಡಿ, ರೇಷ್ಮೆ ಬೆಳೆಗಾರರು ಅತೀವ ಸಂಕಷ್ಟದಲ್ಲಿರುವುದರಿಂದ ರೇಷ್ಮೆ ಇಲಾಖೆ ನೆರವಾಗಬೇಕೆಂದು ಕೋರಿ ಮನವಿ ಸಲ್ಲಿಸಿದರು.
ಇತ್ತೀಚಿನ ಮಳೆ ಹಾಗೂ ವಾತಾವರಣ ವೈಪರೀತ್ಯದಿಂದಾಗಿ ಹಿಪ್ಪುನೇರಳೆ ಸೊಪ್ಪಿಗೆ ವಿವಿಧ ರೋಗಗಳು ತಗುಲುತ್ತಿದ್ದು, ರೋಗ ಹತೋಟಿಗೆ ತರಲು ರಾಸಾಯನಿಕಗಳನ್ನು ಇಲಾಖೆ ವತಿಯಿಂದ ನೀಡಲಾಗುವುದೆಂದು ಆಯುಕ್ತರು ಭರವಸೆ ನೀಡಿದರು.
ರೇಷ್ಮೆ ಕಟಾವು ಯಂತ್ರ ಬೇಕೆನ್ನುವುದು ನಮ್ಮ ರೇಷ್ಮೆ ಬೆಳೆಗಾರರ ಪ್ರಮುಖ ಬೇಡಿಕೆಯಾಗಿದ್ದು, ರೇಷ್ಮೆ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆ ಲಾಗೂ ಆಗುವಂತೆ ಮಾಡಬೇಕೆಂದು ಬೇಡಿಕೆಯನ್ನು ರೈತರು ಮುಂದಿಟ್ಟರು. ಹನಿನೀರಾವರಿ ಬಳಸಲು ಏಳು ವರ್ಷಗಳ ನಂತರ ಮತ್ತೊಮ್ಮೆ ನೀಡುವಂತೆ ಮನವಿ ಸಲ್ಲಿಸಲಾಯಿತು. ರೇಷ್ಮೆ ಇಲಾಖೆಯಲ್ಲಿ 4500 ಅಧಿಕಾರಿಗಳ ಬದಲು 1500 ಮಂದಿಯಷ್ಟೇ ಇದ್ದಾರೆ. ಇದೇ ರೀತಿ ಮುಂದುವರಿದಲ್ಲಿ ಇಲಾಖೆ ಕಣ್ಮುಚ್ಚುತ್ತದೆ ಎಂದು ರೈತ ಮುಖಂಡರು ವಿವರಿಸಿದಾಗ, ಆಯುಕ್ತರು 750 ಮಂದಿಯನ್ನು ಇಲಾಖೆಗೆ ಸೇರಿಸಿಕೊಳ್ಳಲು ಅನುಮೋದನೆ ದೊರಕಿದೆ ಎಂದು ಆಯುಕ್ತರು ಸ್ಪಷ್ಟಿಕರಿಸಿದರು.
ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಗೆ 1400 ಲಾಟ್ ರೇಷ್ಮೆ ಗೂಡಿನ ಆವಕವಿತ್ತು. ಇವತ್ತು 200 ಕ್ಕೂ ಕಡಿಮೆ ಲಾಟ್ ಗಳು ಬರಿತ್ತಿರುವ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ಈ ಬಗ್ಗೆ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬಂದು ವಸ್ತುಸ್ಥಿತಿ ಪರಿಶೀಲಿಸುವುದಾಗಿ ಆಯುಕ್ತರು ರೈತ ಸಂಘದ ಸದಸ್ಯರ ನಿಯೋಗಕ್ಕೆ ಭರವಸೆ ನೀಡಿದರು.