Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ (Taluk Office) ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಮತ್ತು ಕಂದಾಯ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ (National Voters Day) ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆಹನುಮಂತಪ್ಪ ಮಾತನಾಡಿದರು.
ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂದರು.
ಯುವಜನತೆ ಪ್ರತಿ ವರ್ಷ ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಮತದಾರರಾಗಿ ನೋಂದಾವಣೆಗೊಳ್ಳಬೇಕು. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ, ನಾವು ನಮ್ಮ ಆಯ್ಕೆಯನ್ನು ಅಮೂಲ್ಯ ಮತದಾನದ ಮೂಲಕ ವ್ಯಕ್ತಪಡಿಸಬೇಕು ಎಂದು ಹೇಳಿದರು.
“ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ” ಎಂದು ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಹೊಸದಾಗಿ ಮತದಾರರ ಗುರುತಿನ ಚೀಟಿಯನ್ನು ಪಡೆಯುತ್ತಿರುವ ಯುವ ಜನರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್.ಎ.ಪಚ್ಚಾಪುರೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಲೋಕೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ನಗರ ಸಭೆ ಆಯುಕ್ತ ಆರ್.ಶ್ರೀಕಾಂತ್, ತಹಶೀಲ್ದಾರ್ ಬಿ.ಎಸ್.ರಾಜೀವ್, ಎನ್ ಎಸ್ ಎಸ್ ಶಿಕ್ಷಕ ಮುನಿರಾಜು, ಸಿಡಿಪಿಒ ಮಹೇಶ್ ಹಾಜರಿದ್ದರು.