Sidlaghatta : ಶಿಡ್ಲಘಟ್ಟ : ತಾಲ್ಲೂಕಿನ ಕಸಬಾ ಹೋಬಳಿ ಬೋದಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಇದೇ ನ 15 ರ ಶುಕ್ರವಾರ ಕಂದಾಯ ಇಲಾಖೆ ವತಿಯಿಂದ ಫವತಿ ಖಾತೆ ಆಂದೋಲನ ಹಾಗು ಪಿಂಚಣಿ ಅದಾಲತ್ ಅನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಉಪ ತಹಸೀಲ್ದಾರ್ ಪೂರ್ಣಿಮಾ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ತಾಲ್ಲೂಕಿನ ವಿವಿಧ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಿದ್ದು ಮೊದಲಿಗೆ ಕಸಬಾ ಹೋಬಳಿ ಬೋದಗೂರು ಗ್ರಾಮದಲ್ಲಿ ನಡೆಯಲಿದೆ. ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಫವತಿ ಖಾತೆ ವರ್ಗಾವಣೆ ಸೇರಿದಂತೆ ಪಿಂಚಣಿ ಸೌಲಭ್ಯದ ಆದೇಶಪತ್ರಗಳನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ ಎಂದರು.
ತಾಲ್ಲೂಕಿನಾದ್ಯಂತ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ 44,365 ಮಂದಿ ಮಾಶಾಸನ ಪಡೆಯುತ್ತಿದ್ದು ಈ ಪೈಕಿ ವೃದ್ದಾಪ್ಯ ವೇತನ 8.674, ವಿಧವಾ ವೇತನ 8,769, ಅಂಗವಿಕಲ ವೇತನ 4,016, ಸಂಧ್ಯಾ ಸುರಕ್ಷಾ ವೇತನ 21,829, ಮನಸ್ವಿನಿ ವೇತನ 1,063, ಮೈತ್ರಿ ಯೋಜನೆ ವೇತನ 10, ರೈತರ ಆತ್ಮಹತ್ಯೆ ವೇತನ 4, ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 1,071 ಮಂದಿ ಫಲಾನುಭವಿಗಳು ಮಾಶಾಸನ ಪಡೆಯುತ್ತಿದ್ದಾರೆ. ಆದಾರ್ ಲಿಂಕ್ ಆಗದೇ ಇರುವ ಸುಮಾರು 300 ಮಂದಿಯ ಪಿಂಚಣಿ ಸ್ಥಗಿತವಾಗಿದೆ. ಪಿಂಚಣಿ ಸ್ಥಗಿತವಾಗಿರುವ ಫಲಾನುಭವಿಗಳು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸಲ್ಲಿಸಿದಲ್ಲಿ ಆದೇಶ ಪತ್ರ ವಿತರಿಸಲಾಗುವುದು ಎಂದರು.
ಫವತಿ ಖಾತೆ ಬದಲಾವಣೆಗೆ ಮರಣ ಪ್ರಮಾಣ ಪತ್ರ, ಫಾರಂ 19, ಆದಾರ್ ಕಾರ್ಡ್, ವಂಶವೃಕ್ಷ ಸಲ್ಲಿಸಿದ್ದೇ ಆದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಪ್ರಕರಣಗಳನ್ನು ಹೊರತು ಪಡಿಸಿ ಖಾತೆ ವರ್ಗಾವಣೆಗೆ ಕ್ರಮ ವಹಿಸಲಾಗುವುದು ಎಂದರು.
ಈಗಾಗಲೇ ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಗ್ರಾಮ ಸಹಾಯಕರ ಮೂಲಕ ಕಾರ್ಯಕ್ರಮದ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಆಯಾ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಈ ಆಂದೋಲನದ ಸದುಪಯೋಗ ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಿಂಚಣಿ ಶಿರಸ್ತೇದಾರ್ ಎನ್.ಪಿ.ರಾಜು, ಬೋದಗೂರು ಗ್ರಾಮ ಆಡಳಿತಾಧಿಕಾರಿ ಸಿದ್ದಪ್ಪ, ಸಿಬ್ಬಂದಿ ನಾರಾಯನಸ್ವಾಮಿ, ಆನೂರು ಗ್ರಾ.ಪಂ ಸದಸ್ಯ ವಿಜಯೇಂದ್ರ ಹಾಜರಿದ್ದರು.