Sidlaghatta : ನಾಣ್ಯಗಳು ಇತಿಹಾಸದ ಪ್ರತಿಬಿಂಬ. ನಾಣ್ಯಗಳು ಆಯಾ ರಾಜಮನೆತನಗಳು, ರಾಜರು ಮತ್ತು ದೇಶದ ಇತಿಹಾಸವನ್ನು ಹೇಳುತ್ತವೆ. ನಾಣ್ಯಗಳ ಅಧ್ಯಯನದಿಂದ ಆ ಕಾಲದ ಜನ ಜೀವನದ ಮಟ್ಟ, ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿ ತಿಳಿಯಬಹುದು. ನಾಣ್ಯಗಳು ದೇಶದ ಇತಿಹಾಸವನ್ನು ತಿಳಿಸುವ ಸಾಧನವಿದ್ದಂತೆ ಎಂದು ನಾಣ್ಯ ಸಂಗ್ರಹಕಾರ ಎಚ್.ಕೆ.ರಾಮರಾವ್ ಅಭಿಪ್ರಾಯಪಟ್ಟರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಭಾರತ ದರ್ಶನ- ಭಾರತದ ಪ್ರಾಚೀನ, ಅಪೂರ್ವ, ಅಮೂಲ್ಯ, ಐತಿಹಾಸಿಕ ನಾಣ್ಯಗಳ 155 ನೇ ಪ್ರದರ್ಶನ”ದಲ್ಲಿ ಪ್ರದರ್ಶನದಲ್ಲಿ ಅವರು ಮಾತನಾಡಿದರು.
ವಿಜಯನಗರದ ವೈಭವವನ್ನು ಆ ಕಾಲದ ಚಿನ್ನದ ನಾಣ್ಯಗಳೇ ಸಾರುತ್ತದೆ. ಹಾಗೆಯೇ ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸವನ್ನು ತಿಳಿಸುತ್ತದೆ. ನಾಣ್ಯಗಳು ತಯಾರಿಸಿದ ಲೋಹಗಳಿಂದ ಅಂದಿನ ಕಾಲದ ಆರ್ಥಿಕ ವ್ಯವಸ್ಥೆಯನ್ನು ಗಮನಿಸಬಹುದು. ಅಖಂಡ ಭಾರತದ ನಾಣ್ಯಗಳು ಈ ಪ್ರದರ್ಶನದಲ್ಲಿವೆ. ನಮ್ಮ ದೇಶದ ಇತಿಹಾಸ, ಪರಂಪರೆಯ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆ ಪಡಬೇಕು ಎಂದರು.
ಮೌರ್ಯರು, ಶಾತವಾಹನರು, ಗುಪ್ತರು, ಕುಶಾನರು, ರಾಷ್ಟ್ರಕೂಟರು, ಚೋಳ, ಕೊಂಗು, ಚಾಲುಕ್ಯ, ಕದಂಬ, ಬಹುಮನಿ ಸುಲ್ತಾನರು, ವಿಜಯನಗರ ಸಾಮ್ರಾಟರು, ಮೈಸೂರು ಅರಸರು ಸೇರಿದಂತೆ ಕ್ರಿಸ್ತ ಪೂರ್ವ 300 ರಿಂದ ಈವರೆಗಿನ ರಾಷ್ಟ್ರದಲ್ಲಿ ಚಲಾವಣೆಯಲ್ಲಿರುವ ಸುಮಾರು 1500 ನಾಣ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ನಾಣ್ಯವಾಗಿ ಬಳಕೆಯಾಗುತ್ತಿದ್ದ ಉಂಗುರಾಕಾರದ ಅಲಂಕಾರಿಕ ವಸ್ತುಗಳು, ಬೇಟೆಯಾಡುವುದರ ಜೊತೆಗೆ ನಾಣ್ಯವಾಗಿ ಉಪಯೋಗಿಸುತ್ತಿದ್ದ ಚೂಪಾದ ಕಬ್ಬಿಣದ ತುಂಡುಗಳು, ಚಿನ್ನದಿಂದ ಮುದ್ರಿತವಾದ ನಾಣ್ಯಗಳು, ಬೆಳ್ಳಿ ನಾಣ್ಯಗಳು ಎಲ್ಲರ ಗಮನ ಸೆಳೆದವು. ವಿಶೇಷ ಅಂಚೆ ಚೀಟಿಗಳು, ದೇಶ ವಿದೇಶದ ಪುರಾತನ ಮತ್ತು ಈಗಿನ ನೋಟುಗಳು ಸಹ ಪ್ರದರ್ಶನದಲ್ಲಿದ್ದವು.
ಐತಿಹಾಸಿಕ ನಾಣ್ಯಗಳು ಮತ್ತು ಅಂಚೆ ಚೀಟಯ ಪ್ರದರ್ಶನಕ್ಕೆ ಚಾಲನೆ ನೀಡಿದ ಪ್ರಾಂಶುಪಾಲ ಡಾ.ವೆಂಕಟೇಶ್ ಮಾತನಾಡಿ, ಐತಿಹಾಸಿಕ ನಾಣ್ಯಗಳ ಮತ್ತು ಅಂಚೆ ಚೀಟಿಗಳ ಪ್ರದರ್ಶನದ ಮೂಲಕ ಭಾರತ ದರ್ಶನವನ್ನು ವಿದ್ಯಾರ್ಥಿಗಳಿಗೆ ಮಾಡಿಸಲಾಗುತ್ತಿದೆ. ಐತಿಹಾಸಿಕ ನಾಣ್ಯಗಳ ಸಂಗ್ರಹಕಾರ ಎಚ್.ಕೆ.ರಾಮರಾವ್ ರವರ ಸಂಗ್ರಹದಲ್ಲಿರುವ ಅಮೂಲ್ಯ ನಾಣ್ಯಗಳು ಮತ್ತು ಅದರ ಬಗ್ಗೆ ಮಾಹಿತಿ ವಿಶಿಷ್ಟವಾದುದು. ವಿದ್ಯಾರ್ಥಿಗಳಿಗೆ ಮತ್ತು ನಾಣ್ಯಗಳ ಇತಿಹಾಸವನ್ನು ಸಂಶೋಧನೆ ಮಾಡುವವರಿಗೆ ಈ ಪ್ರದರ್ಶನ ಅನುಕೂಲವಾಗುತ್ತದೆ ಎಂದರು.
ಭಾರತ ದರ್ಶನ-155 ನೇ ಪ್ರದರ್ಶನದಲ್ಲಿ ಐತಿಹಾಸಿಕ ನಾಣ್ಯಗಳ ಸಂಗ್ರಹಕಾರ ಎಚ್.ಕೆ.ರಾಮರಾವ್ ರನ್ನು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ನಾಣ್ಯ ಸಂಗ್ರಹಕಾರ ಎಚ್.ಕೆ. ರಾಮರಾವ್, ಶಂಕರ್ ನಾರಾಯಣ್, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ.ವೆಂಕಟೇಶ್, ಪ್ರಾಧ್ಯಾಪಕರಾದ ಡಾ.ಷಫಿ ಅಹಮ್ಮದ್, ಡಾ.ಜಿ.ಮುರಳಿ ಆನಂದ್, ಡಾ.ನರಸಿಂಹಮೂರ್ತಿ, ಡಾ.ವಿಜಯೇಂದ್ರಕುಮಾರ್, ಡಾ.ರವಿಕುಮಾರ್, ಡಾ.ಉಮೇಶ್ ರೆಡ್ಡಿ, ಡಾ.ಎನ್.ಎ.ಆದಿನಾರಾಯಣಪ್ಪ, ಎಂ.ಸುನೀತಾ, ವಿ.ಆರ್.ಶಿವಶಂಕರಿ, ಜಿ.ಬಿ.ವೆಂಕಟೇಶ, ಎಸ್.ಗಿರಿಜಾ ಹಾಜರಿದ್ದರು.