Sidlaghatta : ಶಿಡ್ಲಘಟ್ಟ ನಗರದ ಉಲ್ಲೂರುಪೇಟೆ ಸರ್ಕಾರಿ ಶಾಲೆಯ (Government School) ಆವರಣದಲ್ಲಿ ಮಕ್ಕಳಿಗೆ ತರಕಾರಿ ಬೆಳೆಯಲು ಬೀಜ, ಸಸಿಗಳನ್ನು ನೀಡಿ, ಮಕ್ಕಳಿಂದ ನೆಡಿಸಿ, ಅವುಗಳ ನಿರ್ವಹಣೆಯ ಬಗ್ಗೆ ಎನ್ವೈರ್ನಮೆಂಟ್ ಅಸೋಸಿಯೇಶನ್ ಬೆಂಗಳೂರು ಸಂಸ್ಥೆಯ (Environment Association Of Bangalore) ಅಧ್ಯಕ್ಷ ಡಾ.ಆರ್.ಜಿ.ನಾಡದೂರ್ ಅವರು ಮಾತನಾಡಿದರು.
ಮಕ್ಕಳಿಗೆ ಶಾಲೆಯ ಆವರಣದಲ್ಲಿ ಪೌಷ್ಠಿಕ ತರಕಾರಿಗಳನ್ನು ಬೆಳೆಯಲು ನೆರವು ನೀಡುವ ಮೂಲಕ ಅವರಲ್ಲಿ ಪ್ರಕೃತಿ, ಪರಿಸರ, ಜೀವಶಾಸ್ತ್ರ, ತ್ಯಾಜ್ಯ ನಿರ್ವಹಣೆ ಹಾಗೂ ವಿಜ್ಞಾನ ಪಠ್ಯದ ಹಲವಾರು ಸಂಗತಿಗಳನ್ನು ಕಲಿಸುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದರು.
“ನಮ್ಮ ತೋಟ” ಎಂಬ ಹೆಸರಿನಲ್ಲಿ ನಗರ ಕೇಂದ್ರಿತ ಸರ್ಕಾರಿ ಶಾಲೆಗಳಲ್ಲಿ ತರಕಾರಿಗಳನ್ನು ಬೆಳೆಯಲು ಮಕ್ಕಳಿಗೆ ನೆರವಾಗುತ್ತಿದ್ದೇವೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ನರೇಗಾ ಮೂಲಕ ಆರ್ಥಿಕ ನೆರವು ಸಿಗುತ್ತದೆ. ಆದರೆ ನಗರ ಕೇಂದ್ರಿತ ಸರ್ಕಾರಿ ಶಾಲೆಗಳಿಗೆ ಈ ಸೌಲಭ್ಯವಿಲ್ಲದ್ದರಿಂದ ನಮ್ಮ ಸಂಸ್ಥೆ, ಗ್ರಾಮಾಂತರ ಟ್ರಸ್ಟ್ ಸಹಯೋಗದಲ್ಲಿ ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆ, ಆಜಾದ್ ನಗರ ಉರ್ದು ಸರ್ಕಾರಿ ಪ್ರೌಢ ಶಾಲೆ ಮತ್ತು ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ತರಕಾರಿ ತೋಟಗಳನ್ನು ಮಾಡಿಸುತ್ತಿದ್ದೇವೆ. ಆಗಿಂದಾಗ್ಗೆ ಬಂದು ಅವುಗಳ ನಿರ್ವಹಣೆಯ ಬಗ್ಗೆ ಕಲಿಸಿಕೊಡುತ್ತೇವೆ ಎಂದರು.
ಮಕ್ಕಳು ಬಿಸಿಯೂಟದಲ್ಲಿ ತಾವೇ ಸಾವಯವ ಪದ್ಧತಿಯಲ್ಲಿ ಬೆಳೆದ ಸೊಪ್ಪು, ತರಕಾರಿಗಳನ್ನು ತಿನ್ನುವಂತಾಗಬೇಕು. ತ್ಯಾಜ್ಯದ ಸಮರ್ಪಕ ನಿರ್ವಹಣೆ ಮಾಡಿ, ಗೊಬ್ಬರವಾಗಿಸಿ ತೋಟಕ್ಕೆ ಹಾಕಬೇಕು. ಇದರ ಹಿಂದಿನ ವಿಜ್ಞಾನವನ್ನೂ ತಿಳಿಯಬೇಕು ಎಂದರು.
ಬೆಂಡೆ, ಅವರೆಕಾಯಿ, ಮೆಣಸಿನಕಾಯಿ, ಸೊಪ್ಪುಗಳು, ಸೋರೆಕಾಯಿ, ಮುಂತಾದ ತರಕಾರಿ ಸೊಪ್ಪುಗಳ ನಾಟಿ ಮಾಡಿದ್ದಲ್ಲದೆ, ನಾಟಿ ಕಾರ್ಯಕ್ಕೆ ಅಗತ್ಯ ಉಪಕರಣಗಳನ್ನೂ ನೀಡಿದರು.
ಎನ್ವೈರ್ನಮೆಂಟ್ ಅಸೋಸಿಯೇಶನ್ ಬೆಂಗಳೂರು ಸಂಸ್ಥೆಯ ಕುಮಾರಸ್ವಾಮಿ, ಲಕ್ಷಕುಮಾರ್, ನವೀನ್ ಕುಮಾರ್, ಗ್ರಾಮಾಂತರ ಟ್ರಸ್ಟ್ ಸಂಸ್ಥೆಯ ಉಷಾಶೆಟ್ಟಿ, ಅನಂತಲಕ್ಷ್ಮಿ ಹಾಜರಿದ್ದರು.