
Sidlaghatta : ಶಿಡ್ಲಘಟ್ಟ ನಗರದ ಪೂಜಮ್ಮ ದೇವಿಯ ಕರಗಮಹೋತ್ಸವ ಗುರುವಾರ ರಾತ್ರಿ ಭಕ್ತಿ ಹಾಗೂ ಸಂಪ್ರದಾಯಪೂರಿತವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಅನಾದಿಕಾಲದಿಂದಲೂ ನಡೆಯುತ್ತಿರುವ ಈ ಪವಿತ್ರ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಸೇರಿದ್ದರು.
ಸಾಂಪ್ರದಾಯಿಕ ವಿಧಿವಿಧಾನಗಳ ಪ್ರಕಾರ ದೇವಾಲಯದಲ್ಲಿ ಪೂಜಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಹೂವಿನಿಂದ ಅಲಂಕರಿಸಲಾದ ಕರಗವನ್ನು ಸಂಭ್ರಮದಿಂದ ಹೊರತರು.
ಕೋಲಾರದ ಎಸ್. ಅಗ್ರಹಾರದ ಪಿ. ಶಿವರಾಜ್ ಅವರು ಈ ವರ್ಷದ ಕರಗ ಹೊತ್ತಿದ್ದರು. ಕರಗಮಹೋತ್ಸವವು ಶಕ್ತಿಯ ಆರಾಧನೆಗೆ ಸಲ್ಲುವ ಪುರಾತನ ಸಂಪ್ರದಾಯವಾಗಿದ್ದು, ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಪವಿತ್ರ ಆಚರಣೆ ಭಕ್ತರಲ್ಲಿ ಭಕ್ತಿಭಾವ ಮೂಡಿಸಿತು.
ಮಾರಮ್ಮ ವೃತ್ತ ಮತ್ತು ಕೋಟೆ ವೃತ್ತದಲ್ಲಿ ವಾದ್ಯಗೋಷ್ಠಿಯ ವಿಶೇಷ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಕರಗ ಹೊತ್ತ ವಿಜಯ್ ಕುಮಾರ್ ಅವರು ತಮಟೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದಾಡಿದುದು ಜನರ ಮನಸೆಳೆಯಿತು. ಕರಗದ ದರ್ಶನಕ್ಕಾಗಿ ನಗರವಾಸಿಗಳ ಜೊತೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದಲೂ ಭಕ್ತರು ಆಗಮಿಸಿ, ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದರು.
ವಾರ್ತಾ ತಂಡವು ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷೆಗಳ ಹಾಡುಗಳನ್ನು ವಾದ್ಯಯಂತ್ರಗಳ ಸೊಬಗಿನಲ್ಲಿ ನೃತ್ಯಗಳೊಂದಿಗೆ ಪ್ರದರ್ಶಿಸಿದುದು ಭಕ್ತರಲ್ಲಿ ಭಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸಿದುದರೊಂದಿಗೆ ಉತ್ಸವದ ಮೆರಗು ಹೆಚ್ಚಿಸಿತು.