Sidlaghatta : ಶಿಡ್ಲಘಟ್ಟ ನಗರದ ಟಿ. ಬಿ. ರಸ್ತೆಯ ಒಂದನೇ ಕುರುಬರಪೇಟೆಯಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ(ರಿ) ತಾಲ್ಲೂಕು ಶಾಖೆ ಕಚೇರಿಯನ್ನು ನಗರಸಭೆ ಪೌರಾಯುಕ್ತ ಶ್ರೀಕಾಂತ್ ಉದ್ಘಾಟಿಸಿದರು.
ಸರ್ಕಾರ ಶಿಡ್ಲಘಟ್ಟ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸುವುದರ ಜೊತೆಗೆ ಅವರ ಜೀವನ ಸುಧಾರಣೆಗೆ ಮುಂದಾಗಿದೆ. ಇದರಿಂದಾಗಿ ಹಲವು ವರ್ಷಗಳಿಂದ ಗುರುತಿನ ಚೀಟಿಯಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ದಿನ ಕಳೆಯುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗಲಿದೆ.
ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ನಡೆಸಿದ್ದು, ಅರ್ಹ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಮಾರಾಟ ಪ್ರಮಾಣ ಪತ್ರವನ್ನು ವಿತರಿಸುವಂತೆ ಜಿಲ್ಲಾವಾರು ಕೌಶಲ್ಯಾಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಕೌಶಲ್ಯ ಮಿಷನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಅಕ್ರಂ ಪಾಷ ಮಾತನಾಡಿ, ಯಾವುದೆ ಪಕ್ಷಬೇದವಿಲ್ಲದೆ ತಾಲ್ಲೂಕು ಬೀದಿಬದಿ ವ್ಯಾಪಾರಿ ಸಂಘಟನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಿಂಗಳು ಕುಂದು ಕೊರತೆಗಳ ಸಭೆ ಕರೆದು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಈ ಉದ್ದೇಶದಿಂದ ಶಿಡ್ಲಘಟ್ಟದಲ್ಲಿ ಕಚೇರಿ ಉದ್ಘಾಟನೆ ಮಾಡಲಾಗಿದೆ. ಜಿಲ್ಲೆಯ ಕಚೇರಿ ಬಿಟ್ಟರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಥಮವಾಗಿ ಕಚೇರಿ ಉದ್ಘಾಟನೆ ಮಾಡಿರುವುದು ಬಹಳ ಸಂತಸವಾಗುತ್ತದೆ ಎಂದರು.
ನಗರ ಸಭೆ ಸಂಘಟನೆಗಳ ಒಕ್ಕೂಟದ ಅಧಿಕಾರಿ ಸುಧಾ, ಮಾನವ ಹಕ್ಕುಗಳ ಕಮಿಟಿ ತಾಲ್ಲೂಕು ಗೌರವಾಧ್ಯಕ್ಷ ಕುಂದಲಗುರ್ಕಿ ನಟರಾಜ್, ಜಿಲ್ಲಾಮುಖಂಡ ಅಸ್ಲಾಂ, ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ಕಾರ್ಯದರ್ಶಿ ಇಲಿಯಾಜ್ ಪಾಷ, ಉಪಾದ್ಯಕ್ಷ ಗೋಪಾಲಪ್ಪ, ಎಚ್.ಲಕ್ಷ್ಮಿ, ತಿಮ್ಮರಾಯಪ್ಪ, ಸುರೇಶ್, ಮಹೇಶ್, ಮುನಿರತ್ನಮ್ಮ, ವೆಂಕಟರೊಣಪ್ಪ, ಗೋವಿಂದರಾಜು, ಬಾಷಾ ಉಪಸ್ಥಿತರಿದ್ದರು.