![](https://chikkaballapur.com/wp-content/uploads/2025/02/11FebSa.jpg)
Sidlaghatta : ಪಾಪಾಗ್ನಿ ನದಿ ತಟದ ತಲಕಾಯಲಬೆಟ್ಟದಲ್ಲಿ ನೆಲೆಸಿರುವ ಶ್ರೀಭೂನೀಳಾ ಸಮೇತ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಶ್ರೀಮತ್ಕಲ್ಯಾಣ ಬ್ರಹ್ಮರಥೋತ್ಸವ ಕಾರ್ಯಕ್ರಮ ಫೆ.12 ರ ಬುಧವಾರ ಸಡಗರ ಸಂಭ್ರಮ ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಬ್ರಹ್ಮರಥೋತ್ಸವ ಅಂಗವಾಗಿ ಕಳೆದ ಐದು ದಿನಗಳಿಂದಲೂ ವಿವಿಧ ರೀತಿಯ ಪೂಜೆ ಹೋಮಗಳು ನಡೆಯುತ್ತಿದ್ದು ಬುಧವಾರ ನಡೆಯುವ ಶ್ರೀಮತ್ಕಲ್ಯಾಣ ಬ್ರಹ್ಮರಥೋತ್ಸವ ಉತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ಸಹಸ್ರಾರು ಭಕ್ತರು ಬ್ರಹ್ಮರಥೋತ್ಸವನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಅರ್ಚಕ ವಾಸುದೇವ ರಾಮಾನುಜ ಭಟ್ಟಾಚಾರ್ಯ ಅವರ ನೇತೃತ್ವದಲ್ಲಿ ಆಗಮೀಕ ಕೆ.ಯತಿರಾಜನ್ ಅವರ ತಂಡದಿಂದ ಈಗಾಗಲೆ ನಾನಾ ರೀತಿಯ ಪೂಜೆಗಳು ನಡೆಯುತ್ತಿದ್ದು, ಈಗಾಗಲೆ ರಾಜ್ಯದ ಹಲವು ಕಡೆಯಿಂದ ಎತ್ತುಗಳು ಪರಿಷೆಗೆ ಬಂದಿವೆ. ಬುರಗು ಬತಾಸು ಸಿಹಿ ತಿಂಡಿ ತಿನಿಸು ಆಟಿಕೆಗಳ ಅಂಗಡಿಗಳು ತಲೆ ಎತ್ತುತ್ತಿವೆ.
ಬ್ರಹ್ಮರಥೋತ್ಸವ ಯಶಸ್ವಿಯಾಗಲಿ ಎಂದು ಶುಭ ಕೋರುವ, ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿರುವ, ವಾಹನ, ಅಂಗಡಿ, ಎತ್ತುಗಳ ಪ್ರವೇಶ ಶುಲ್ಕ ಭರಿಸುವ, ಬೆಟ್ಟದ ಮೇಲಿನ ಗುಡಿಗೆ ರಸ್ತೆ ನಿರ್ಮಿಸಿ, ಪಾರ್ಕಿಂಗ್ ಜಾಗ ಮಾಡಿಕೊಟ್ಟ ಜನ ನಾಯಕರ ಫ್ಲೆಕ್ಸ್, ಬ್ಯಾನರ್ ಗಳು ದೇವಾಲಯದ ದಾರಿಯುದ್ದಕ್ಕೂ ರಾರಾಜಿಸುತ್ತಿವೆ.
ಶ್ರೀರಾಮಾಯಣದಂತ ಮಹಾ ಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯ ಪೂರ್ವಾಶ್ರಮದ ನೆಲೆ ಇದು ಎಂಬ ನಂಬಿಕೆಯಿರುವ ತಲಕಾಯಲನಬೆಟ್ಟದಲ್ಲಿ ನೆಲೆಸಿರುವ ಶ್ರೀಭೂನೀಳ ಸಮೇತ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಕಳೆ ಕಟ್ಟತೊಡಗಿದೆ.
ತಲಕಾಯಲಬೆಟ್ಟಕ್ಕಿದೆ ವಾಲ್ಮೀಕಿ ನಂಟು :
![Sidlaghatta Talakayalabetta Sri Venkataramanaswamy BrahmaRathotsava](https://chikkaballapur.com/wp-content/uploads/2025/02/11FebSb-1024x683-1.jpg)
ಮಹಾಕಾವ್ಯ ಶ್ರೀರಾಮಾಯಣದ ಕತೃ ಶ್ರೀಮಹರ್ಷಿ ವಾಲ್ಮೀಕಿಯ ಪೂರ್ವಾಶ್ರಮದ ಹೆಸರು ಮುತ್ತುರಾಜ. ಮುತ್ತುರಾಜನ ಬಾಲ್ಯ, ಸಾಂಸಾರಿಕ ಬದುಕು, ಸಂಸಾರವನ್ನು ನಡೆಸಲು ದಾರಿ ಹೋಕರ ತಲೆ ಕಡಿದು ದೋಚುತ್ತಿದ್ದ ಸ್ಥಳ ಹಾಗೂ ಮುನಿಗಳ ಮಾರ್ಗದರ್ಶನದಿಂದ ಪಾಪ ವಿಮೋಚನೆಗೊಂಡ ಸ್ಥಳ ತಲಕಾಯಲಬೆಟ್ಟ ಎಂಬ ಪ್ರತೀತಿ, ನಂಬಿಕೆ ಇದೆ.
ಎಲ್ಲರಂತ ಸಾಮಾನ್ಯ ವ್ಯಕ್ತಿಯಾಗಿದ್ದ ಮುತ್ತುರಾಜನು ತನ್ನ ಹೆಂಡತಿ ಮಕ್ಕಳನ್ನು ಸಾಕಿ ಸಲಹುವುದಕ್ಕೆ ಬೆಟ್ಟದಲ್ಲಿ ಅಡಗಿ ಕುಳಿತು ದಾರಿಯಲ್ಲಿ ಸಾಗುವವರನ್ನು ಹಿಡಿದು ಅವರ ತಲೆ ಕಡಿದು ಅವರ ಬಳಿಯ ಚಿನ್ನಾಭರಣ ನಗ ನಗದನ್ನು ದೋಚುತ್ತಿದ್ದನಂತೆ.
ಆ ಮಾರ್ಗದಲ್ಲಿ ಒಮ್ಮೆ ನಾರದ ಮುನಿಗಳು ಸಾಗುವಾಗ ಅವರನ್ನು ಕೂಡ ಮುತ್ತುರಾಜ ಅಡ್ಡಗಟ್ಟಿ ದೋಚಲು ಮುಂದಾದಾಗ ಮುನಿಗಳ ಉಪದೇಶದಿಂದ ಪರವಶನಾದ ಮುತ್ತುರಾಜನು ದೀರ್ಘ ಮತ್ತು ಕಠಿಣ ತಪಸ್ಸಿಗೆ ಕುಳಿತನಂತೆ.
ತಪಸ್ಸಿಗೆ ಕುಳಿತ ಮುತ್ತುರಾಜನ ಸುತ್ತಲೂ ಹುತ್ತ ಬೆಳೆದು ಮೋಕ್ಷ ದೊರೆತಾಗ ಹುತ್ತದಿಂದ ಹೊರ ಬಂದವನಾದ್ದರಿಂದ ವಾಲ್ಮೀಕ (ಸಂಸ್ಕೃತದಲ್ಲಿ ಹುತ್ತಕ್ಕೆ ವಾಲ್ಮೀಕ ಎಂದರ್ಥವಿದೆ)ನಾಗಿ ಪರಿವರ್ತನೆ ಆದರಂತೆ ಎಂದು ಹಿರಿಯರು ಇತಿಹಾಸವನ್ನು ಮೆಲಕು ಹಾಕುತ್ತಾರೆ.
ದಾಖಲೆಗಳು ಸಾರುತ್ತವೆ. ಪಾಪ ವಿಮೋಚನೆ ನಂತರ ಮುತ್ತುರಾಜ ವಾಲ್ಮೀಕಿಯಾಗಿ ರಚಿಸಿದ ರಾಮಾಯಣ ಇಡೀ ಜಗತ್ತಿಗೆ ಮಹಾಕಾವ್ಯ ಆಗಿದ್ದು ಇದೀಗ ಇತಿಹಾಸ.