Melur, Sidlaghatta : ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆರೋಗ್ಯ ಕಾರ್ಡ್ ಕೊಡಿಸುವುದು ಸೇರಿದಂತೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಬಿ.ಎನ್.ರವಿಕುಮಾರ್ ರನ್ನು ಮೇಲೂರಿನ ಅವರ ನಿವಾಸದಲ್ಲಿ ಆಹ್ವಾನಿಸಿ ಅವರು ಮಾತನಾಡಿದರು.
ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರಾದ ಆರ್.ಅಶೋಕ್ ಹಾಗು ಆಶ್ವತ್ಥನಾರಾಯಣ ಅವರು ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಾಸಕ ಬಿ.ಎನ್.ರವಿಕುಮಾರ್ ರನ್ನು ಆಹ್ವಾನಿಸಿದರು.
ಈವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿದ್ದು ಈ ಭಾಗದ ಶಿಕ್ಷಕರ ಹಾಗು ವಿದ್ಯಾರ್ಥಿಗಳ ಸಮಸ್ಯೆಯ ಅರಿವಿದೆ. ಒಮ್ಮೆ ಪಕ್ಷೇತರನಾಗಿ ಸ್ಪರ್ಧಿಸಿದ್ದರೆ ಇನ್ನೆರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ವಿಜೇತನಾಗಿದ್ದೆ. ಈ ಭಾರಿಯೂ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಬೆಂಬಲಿಸುವಂತೆ ಕೋರಿದರು.
ಸರ್ಕಾರಿ ನೌಕರರು ಹಾಗು ಆಶಾ ಕಾರ್ಯಕರ್ತೆಯರಿಗೂ ಆರೋಗ್ಯ ಕಾರ್ಡ್ ಸಿಗುತ್ತಿದೆ. ಆದರೆ ರಾಜ್ಯಾದ್ಯಂತ ಇರುವ ಸುಮಾರು 15 ಲಕ್ಷ ಮಂದಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸಿಗುತ್ತಿಲ್ಲ. ಹಾಗಾಗಿ ಈ ಬಾರಿ ಎಲ್ಲಾ ಅನುದಾನ ರಹಿತ ಶಿಕ್ಷಕರಿಗೂ ಆರೋಗ್ಯ ಕಾರ್ಡ್ ಕೊಡಿಸುವ ಕೆಲಸ ಮಾಡಲಾಗುವುದು ಎಂದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೂಚನೆಯ ಮೇರೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಮತಯಾಚಿಸುವ ಜೊತೆಗೆ ಅವರನ್ನು ಮತ್ತೊಮ್ಮೆ ವಿಜೇತರನ್ನಾಗಿಸಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಬಂಕ್ ಮುನಿಯಪ್ಪ, ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರಗೌಡ, ಮುಖಂಡರಾದ ತಾದೂರು ರಘು, ಗೋಪಿನಾಥ್ ಹಾಜರಿದ್ದರು.