Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಅನಧಿಕೃತವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರ ನೇತೃತ್ವದ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಕೇಂದ್ರವನ್ನು ಸೀಜ್ ಮಾಡಿದೆ.
ಬಾಲಾಜಿ ಕಲ್ಯಾಣ ಮಂಟಪದ ಹತ್ತಿರ “ಪಾರಂಪರಿಕ ವೈದ್ಯ ಮೂಳೆ ಚಿಕಿತ್ಸಾಲಯ” ಎಂಬ ನಾಮಫಲಕ ಅಳವಡಿಸಿದ್ದ ರಾಜಣ್ಣ ಎಂಬ ವ್ಯಕ್ತಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದ. ಚಿಂತಾಮಣಿ ತಾಲ್ಲೂಕಿನ ಗುನ್ನಹಳ್ಳಿ ನಿವಾಸಿಯಾದ ಈ ವ್ಯಕ್ತಿ ಪ್ರತಿದಿನ ಹಂಡಿಗನಾಳ ಗ್ರಾಮಕ್ಕೆ ಬಂದು ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಪರವಾನಗಿ ಇಲ್ಲದೆ ನಿರ್ವಹಿಸುತ್ತಿದ್ದ ಈ ಚಿಕಿತ್ಸಾಲಯವನ್ನು ತಕ್ಷಣವೇ ತಡೆಯಲು ಸೂಚಿಸಿ, ಬೀಗ ಜಡಿದರು. ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಸಹ ಭಾಗವಹಿಸಿದ್ದರು.