Bashettahalli, Sidlaghatta : ತರಕಾರಿ ಬೆಳೆಯಲ್ಲಿನ ನಾನಾ ಬಗೆಯ ವೆಚ್ಚಗಳನ್ನು ತಡೆಗಟ್ಟುವ ಸಲುವಾಗಿ ಮಹಿಳಾ ರೈತರು ತೋಟಗಾರಿಕೆಯಲ್ಲಿ ಉನ್ನತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ. ರಮ್ಯ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಗೌಡನಹಳ್ಳಿ ಗ್ರಾಮದ ಸಮುದಾಯಭವನದಲ್ಲಿ ಬುಧವಾರ ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ಶ್ರೀ ಗಂಗಾ ಭವಾನಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಸಹಯೋಗದಲ್ಲಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ “ಸಣ್ಣ ಹಿಡುವಳಿ ರೈತ ಮಹಿಳೆಯರ ಜೀವನೋಪಾಯ ಭದ್ರತೆಯ ಬಲವರ್ಧನೆಗಾಗಿ ವೈವಿಧ್ಯಮಯ ವಿಸ್ತರಣ ವಿಧಾನಗಳ ಮೂಲಕ ತೋಟಗಾರಿಕಾ ತಂತ್ರಜ್ಞಾನಗಳ ಅಳವಡಿಸುವ ಯೋಜನೆ” ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದ ರೈತ ಮಹಿಳೆಯರ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸಲು ಕಾರ್ಯತಂತ್ರದ ಚೌಕಟ್ಟನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತೋಟಗಾರಿಕೆ ತಂತ್ರಜ್ಞಾನಗಳ ಪ್ರಸಾರ ಮತ್ತು ತೋಟಗಾರಿಕೆಯಲ್ಲಿ ರೈತ ಮಹಿಳೆಯರ ಪ್ರಸ್ತುತ ತಾಂತ್ರಿಕ ಕೌಶಲ್ಯ ಹಾಗೂ ತರಬೇತಿ ಅಗತ್ಯಗಳನ್ನು ನಿರ್ಣಯಿಸುವದರ ಬಗೆಗೆ ಅವರು ವಿವರಿಸಿದರು.
ರೈತ ಮಹಿಳೆಯರು ಮೊದಲಿಗೆ ಕುಟುಂಬದ ಆರೋಗ್ಯಕ್ಕಾಗಿ ಕೈತೋಟದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಅವುಗಳಿಂದ ಗೃಹ ನಿರ್ವಹಣೆ ಮಾಡಿ ನಂತರ ಉಳಿದ ಬೆಳೆಗಳನ್ನ ಮಾರಾಟ ಮಾಡಿ ಆದಾಯವನ್ನು ಗಳಿಸಬಹುದು. ಮಹಿಳಾ ರೈತರ ಪೌಷ್ಟಿಕತೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಉತ್ತಮ ರೀತಿಯ ಬೆಳೆಗಳನ್ನು ಬೆಳೆದು ಸೇವಿಸಬಹುದು. ವಿವಿಧ ರೀತಿಯ ತರಕಾರಿ ಸೊಪ್ಪುಗಳನ್ನ ಬೆಳೆದು ಅವುಗಳನ್ನ ಸೇವಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಕಾರ್ಯ ಮಾಡಬೇಕು ಎಂದು ಹೇಳಿದರು.
ವಿಜ್ಞಾನಿ ಡಾ.ರಾಧ ಲಘು ಪೋಷಕಾಂಶಗಳು, ಸೂಕ್ಷಾಣು ಜೀವಿಗಳ ಜೈವಿಕ ಮಿಶ್ರಣಗಳ ಬಗ್ಗೆ ಮತ್ತು ಡಾ.ಕೆರೋಲಿನ್ ಅವರು, ರೈತರು ಮಾವಿನಹಣ್ಣು, ನಿಂಬೆಹಣ್ಣು, ದಾಳಿಂಬೆ, ಸಪೋಟ, ಸೀಬೆ ಹೀಗೆ ಹಲವು ರೀತಿಯ ಹಣ್ಣುಗಳನ್ನು ಬೆಳೆದು ಅವುಗಳನ್ನ ಯಾವ ರೀತಿ ಕಟಾವು ಮಾಡಬೇಕು ಎಂಬುದನ್ನು ವಿವಿಧ ರೀತಿಯ ಸಲಕರಣೆಗಳನ್ನ ಪ್ರದರ್ಶನ ಮಾಡಿ ಅವುಗಳ ಉಪಯೋಗವನ್ನು ರೈತರಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ 30 ರೈತ ಮಹಿಳೆಯರಿಗೆ ಉಚಿತವಾಗಿ ಬಿತ್ತನೆ ಬೀಜಗಳು ಹಾಗೂ ಮಹಿಳೆಯರ ಬಲವರ್ಧನೆ ಹೆಚ್ಚಿಸುವ ಸೊಪ್ಪುಗಳ ಬಿತ್ತನೆ ಬೀಜಗಳನ್ನು ಹಾಗೂ ತರಕಾರಿ ಲಘು ಪೋಷಕಾಂಶಗಳು, ಸೂಕ್ಷಾಣು ಜೀವಿಗಳ ಜೈವಿಕ ಮಿಶ್ರಣ ಹಾಗೂ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು.
ಯೋಜನೆಯ ಫೀಲ್ಡ್ ಅಸಿಸ್ಟೆಂಟ್ ಕೌಶಿಕ ಬಿ.ಕೆ , ಶ್ರೀ ಗಂಗಾ ಭವಾನಿ ತೋಟಗಾರಿಕೆ ಅಧ್ಯಕ್ಷ ವಿಜಯ ಭಾವರೆಡ್ಡಿ, ಉಪಾಧ್ಯಕ್ಷ ಆಂಜನೇಯರೆಡ್ಡಿ, ನಿರ್ದೇಶಕರಾದ ಎ.ಆರ್ ಶಿವಣ್ಣ, ಟಿ.ಕೆ ಅರುಣ್ ಕುಮಾರ್, ರವಿಕುಮಾರ್, ಶಿವಾರೆಡ್ಡಿ. ಎಲ್. ಎನ್, ಕಾರ್ಯ ನಿರ್ವಾಹಕ ಮಧು. ಎಸ್. ಎನ್, ವಿಶ್ವರೂಪ, ಶಿವಕುಮಾರ್. ಬಿ, ವೆಂಕಟರೆಡ್ಡಿ, ಗೋವಿಂದರಾಜ, ಮುನಿಕೃಷ್ಣಪ್ಪ, ಸೊಣ್ಣೆಗೌಡ ಮಹಿಳಾ ರೈತರು ಹಾಜರಿದ್ದರು.