Jangamakote, Sidlaghatta : ಹಿಪ್ಪುನೇರಳೆಗೆ ನುಸಿ ಪೀಡೆ ಹೆಚ್ಚಿದ್ದು, ಇಳುವರಿ ಹಾಗೂ ಸೊಪ್ಪಿನ ಸಾರ ಕುಂಠಿತಗೊಳ್ಳುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷದೋಪಚಾರ ಮಾಡಿ ರೋಗವನ್ನು ನಿಯಂತ್ರಿಸಬಹುದು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮರಾಜು ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ದೇವಗಾನಹಳ್ಳಿ ಹಾಗೂ ವಲ್ಲಪ್ಪನಹಳ್ಳಿ ಗ್ರಾಮಗಳ ವಿವಿಧ ರೈತರ ತೋಟಗಳಿಗೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಚರ್ಚಿಸಿ ನುಸಿ ಪೀಡೆ ರೋಗ ಲಕ್ಷಣಗಳು ಹಾಗು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಕರಪತ್ರ ವಿತರಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಈ ನುಸಿ ಪೀಡೆ ಬಾಧೆ ಹೆಚ್ಚು ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೀಗ ವರ್ಷದ ಉದ್ದಕ್ಕೂ ಕಾಣಿಸುತ್ತಿದೆ ಎಂದ ಅವರು, ನುಸಿ ಪೀಡಿಗೆ ಕಾರಣ, ನಿಯಂತ್ರಣಕ್ಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ನುಸಿ ಪೀಡಿತ ಹಿಪ್ಪುನೇರಳೆ ಸೊಪ್ಪಿಗೆ ಆರಂಭದಲ್ಲಿಯೆ ಮೊದಲು ನೀರನ್ನ ಎಲೆಯ ಕೆಳಭಾಗದಿಂದ ಸಿಂಪಡಿಸಬೇಕು. ಇದರಿಂದ ಅರ್ಧದಷ್ಟು ನುಸಿಯು ಕೆಳಗೆ ಉದುರಿ ಹೋಗುತ್ತದೆ. ಆ ನಂತರ ಮಾರನೇ ದಿನವೇ ವಿಡಿ ಗ್ರೀನ್ ಪಾತ್ ಸಸ್ಯ ಜನ್ಯ ಔಷಧಿಯನ್ನು ಒಂದು ವಾರದ ಅಂತರದಲ್ಲಿ ಎರಡು ಭಾರಿ ಸಂಪಡಿಸಬೇಕು. ವಿಡಿ ಗ್ರೀನ್ ಪಾತ್ ಔಷಧಿಯನ್ನು ಸಿಂಪಡಿಸಿದ ಐದು ದಿನಗಳ ನಂತರ ಹುಳುಗಳಿಗೆ ಸೊಪ್ಪನ್ನು ಕೊಡಬಹುದು.
ಈ ನುಸಿ ಪೀಡೆಯು ಕೀಟ ನಾಶಕ ಔಷಧಿಗಳ ಸಿಂಪಡಣೆಯಿಂದ ನಾಶವಾಗೊಲ್ಲ ನುಸಿ ಪೀಡೆಯ ಔಷಧಿಯಿಂದಲೆ ನಾಶವಾಗುತ್ತದೆ ಎಂಬುದನ್ನು ರೈತರು ಮನದಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿದರು.
ಔಷಧಿಯನ್ನು ಸಿಂಪಡಿಸುವಾಗಲೂ ಸಹ ಎಲೆಯ ತಳಭಾಗದಿಂದಲೆ ಸಿಂಪಡಿಸಬೇಕು, ನುಸಿ ಪೀಡೆಗಳು ಎಲೆಯ ತಳಭಾಗದಲ್ಲೆ ತಳವೂರುವುದರಿಂದ ಬೇಗನೆ ಸಾವನ್ನಪ್ಪುತ್ತವೆ ಎಂದು ವಿವರಿಸಿದರು.
ಹಿಪ್ಪು ನೇರಳೆ ಕಡ್ಡಿಗಳ ನಡುವಿನ ಸಾಲಿನ ಅಂತರ ಹಾಗೂ ಕಡ್ಡಿಯಿಂದ ಕಡ್ಡಿಯ ನಡುವಿನ ಅಂತರ ಹೆಚ್ಚಿರಬೇಕು, ಇದರಿಂದ ಸಾಕಷ್ಟು ಗಾಳಿ ಬೆಳಕು ಬಿಸಿಲಿನ ಕಿರಣಗಳು ಬಿದ್ದು ರೋಗಗಳ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ಸಲಹೆ ನೀಡಿದರು.
ಅಂತರ ಹೆಚ್ಚುವುದರಿಂದ ಇಳುವರಿ ಕಡಿಮೆ ಆಗುತ್ತದೆ ಎಂಬ ಭಯ ಬೇಡ ಅಂತರ ಹೆಚ್ಚಿಸಿ ನಾಟಿ ಮಾಡುವುದರಿಂದ ಸಾಮಾನ್ಯ ಪದ್ದತಿಗಿಂತಲೂ ಹೆಚ್ಚು ಇಳುವರಿಯ ಸೊಪ್ಪನ್ನು ಪಡೆಯಬಹುದು. ಈಗಾಗಲೆ ಅದು ಸಾಕಷ್ಟು ರೈತರು ಪ್ರಯೋಗ ನಡೆಸಿದ್ದ ಫಲ ನೀಡಿದೆ ಎಂದು ಹೇಳಿದರು.
ಸೊಪ್ಪಿನಲ್ಲಿನ ಸಾರವೂ ಹೆಚ್ಚಿ ರೇಷ್ಮೆ ಹುಳುಗಳ ಬೆಳೆಯೂ ಉತ್ತಮವಾಗಿ ಆಗುತ್ತದೆ ಹಾಗೂ ಒಳ್ಳೆ ಗುಣಮಟ್ಟದ ರೇಷ್ಮೆಗೂಡನ್ನು ಬೆಳೆಯಲು ನೆರವಾಗುತ್ತದೆ ಎಂದು ಹೇಳಿದರು. ಐದು ಅಡಿಗಳ ಸಾಲಿನ ಅಂತರದ ನಾಟಿಗೆ ಸರ್ಕಾರವು ಇಲಾಖೆಯಿಂದ ಸಾಕಷ್ಟು ನೆರವನ್ನು ನೀಡುತ್ತಿದ್ದು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ರೇಷ್ಮೆ ನಿರೀಕ್ಷಕ ಸೋಮಪ್ಪ ಮಕಣಾಪುರ, ಮಂಜುನಾಥ್ ಜಗತಾಪ್, ಸಿಬ್ಬಂದಿ ಮುನಿರಾಜು, ರೈತರಾದ ಯಳಪ್ಪ, ರಾಜಣ್ಣ, ನಾಗರಾಜು, ಬೀರೇಗೌಡ, ಮುನಿರಾಜು ಹಾಜರಿದ್ದರು.