Gauribidanur : ಗೌರಿಬಿದನೂರು ನಗರದ ಎಚ್.ಎನ್.ಕಲಾಭವನದಲ್ಲಿ ಸೋಮವಾರ ರಾತ್ರಿ ‘ಸ್ಮಶಾನ ಕುರುಕ್ಷೇತ್ರ’ ನಾಟಕ (Smashana Kurukshetra Drama Police) ಪೊಲೀಸರು ಅಭಿನಯಿಸಿದರು. ನಾಟಕದಲ್ಲಿ ಗೌರಿಬಿದನೂರು ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ಅವರು ಕೌರವೇಂದ್ರನ (ದುರ್ಯೋಧನ) ಪಾತ್ರ ನಿರ್ವಹಿಸಿದ್ದರು. ಭಾನು ಪ್ರಕಾಶ್ ನೀನಾಸಂ ನಾಟಕ ನಿರ್ದೇಶಿಸಿದ್ದರೆ, ಸಿದ್ದೇಶ್ ಕಲಾ ವಿನ್ಯಾಸ ಮಾಡಿದ್ದರು.
ಈ ಸಂದರ್ಭದಲ್ಲಿ ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಮಾತನಾಡಿ “ಕುವೆಂಪು ಅವರು ರಚಿಸಿರುವ ಎಲ್ಲ ನಾಟಕಗಳಲ್ಲಿ ಸಾಮಾಜಿಕ ಕಳಕಳಿ ಇದ್ದು ಅವರು ಯುದ್ಧಗಳನ್ನು ವಿರೋಧಿಸಿ ಯುದ್ಧದ ಪರಿಣಾಮಗಳು ಮತ್ತು ಅನಾಹುತಗಳು ಯಾವ ರೀತಿ ಆಗುತ್ತವೆ ಎನ್ನುವುದನ್ನು ಅವರು ನಾಟಕಗಳ ಮೂಲಕ ತಿಳಿಸಿದ್ದರು”ಎಂದು ಹೇಳಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ, ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಹಾಗೂ ತಾಲ್ಲೂಕಿನ ಅಧಿಕಾರಿಗಳು ನಾಟಕ ವೀಕ್ಷಿಸಿದರು.