Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 53 ಕೇಂದ್ರಗಳಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆ (SSLC exams) ಶುಕ್ರವಾರ (March 21) ಆರಂಭವಾಗಲಿದ್ದು15,763 ವಿದ್ಯಾರ್ಥಿಗಳು ಮೊದಲ ಬಾರಿಗೆ ಹಾಗೂ 727 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು , ” ಪರೀಕ್ಷೆ ಏ.4ರವರೆಗೆ ನಡೆಯಲಿರುವ ವಾರ್ಷಿಕ ಪರೀಕ್ಷೆ ಯಾವುದೇ ಅಡಚಣೆಯಿಲ್ಲದೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. 309 ಪ್ರೌಢಶಾಲೆಗಳಲ್ಲಿಯೂ ಸಿ.ಸಿ.ಟಿ.ವಿ ಕ್ಯಾಮೆರಾ ಹಾಕಲಾಗಿದ್ದು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಪ್ರತಿ ಕೊಠಡಿಯಲ್ಲಿ, ಕಚೇರಿಯಲ್ಲಿ ಮತ್ತು ಕಾರಿಡಾರ್ನಲ್ಲಿ ಕ್ಯಾಮೆರಾಗಳ್ನು ಹಾಕಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯ ಜೆರಾಕ್ಸ್ ಸೆಂಟರ್‌ಗಳನ್ನು ಮುಚ್ಚಲು ಸೂಚಿಸಲಾಗಿದ್ದು ಎಲ್ಲಾ ಕೇಂದ್ರಗಳಲ್ಲಿ, ವಿದ್ಯುತ್ ವ್ಯವಸ್ಥೆ ಖಚಿತಪಡಿಸಿಕೊಳ್ಳಲು ಎಚ್ಚರಿಕೆಯಿಂದಿರುವುದಾಗಿ ಮತ್ತು ಶಾಂತಿ ಕಾಪಾಡಲು ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ. ಪ್ರಶ್ನೆಪತ್ರಿಕೆಗಳನ್ನು ಸಕಾಲಕ್ಕೆ ಕೇಂದ್ರಗಳಿಗೆ ವಿತರಿಸಲು 20 ಮಾರ್ಗಾಧಿಕಾರಿಗಳು ನೇಮಿಸಲಾದರೆ, 53 ಪರೀಕ್ಷಾ ಕೇಂದ್ರಗಳಿಗೆ 53 ಕಸ್ಟೋಡಿಯನ್ಸ್ ಹಾಗೂ 18 ದೊಡ್ಡ ಕೇಂದ್ರಗಳಿಗೆ ಹೆಚ್ಚುವರಿ ಉಪ ಮುಖ್ಯ ಅಧೀಕ್ಷಕರು ನೇಮೀಸಲಾಗಿದೆ.” ಎಂದು ಹೇಳಿದರು.
ಪರೀಕ್ಷೆಗೆ 15,763 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅವುಗಳಲ್ಲಿ 6,541 ಸರ್ಕಾರಿ ಶಾಲೆಗಳ, 1,032 ವಸತಿ ಶಾಲೆಗಳ, 2,762 ಅನುದಾನಿತ ಶಾಲೆಗಳ ಮತ್ತು 5,428 ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಸೇರಿದ್ದಾರೆ. ಅಂಗವಿಕಲ ವಿದ್ಯಾರ್ಥಿಗಳಿಗೆ ನೆಲಮಹಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ದಿನ ಶಾಂತಿ ಕಾಪಾಡಲು ಪೊಲೀಸ್ ಸಿಬ್ಬಂದಿ, ತುರ್ತು ವೈದ್ಯಕೀಯ ಸೇವೆಗಾಗಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷ, ಶಾಲಾ ಶಿಕ್ಷಣ ಉಪನಿರ್ದೆಶಕ ಮುನಿಕಂಪೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.