Sidlaghatta : ಇತಿಹಾಸ ಪ್ರಸಿದ್ದ ತಲಕಾಯಲಬೆಟ್ಟದ ಶ್ರೀವೆಂಕಟರಮಣಸ್ವಾಮಿ ದೇವಾಲಯದ ರಾಜಗೋಪುರ ಹಾಗೂ ಬೆಟ್ಟದ ಮೇಲಿನ ಮೂಲ ದೇವರ ದೇವಾಲಯಕ್ಕೆ ತೆರಳುವ ಮೆಟ್ಟಿಲುಗಳ ರಸ್ತೆಯ ಅಭಿವೃದ್ದಿಪಡಿಸಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು KPCC ಸಂಯೋಜಕ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಿಳಿಸಿದರು.
ತಾಲ್ಲೂಕಿನ ಶ್ರೀಕ್ಷೇತ್ರ ತಲಕಾಲಬೆಟ್ಟದ ಶ್ರೀವೆಂಕಟರಮಣಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಪ್ರತಿ ಶನಿವಾರ ಅನ್ನಸಂತರ್ಪಣೆ ಕಾರ್ಯಕ್ಕೆ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ದೇವಾಲಯದ ರಾಜಗೋಪರ ನಿರ್ಮಾಣಕ್ಕಾಗಿ ತಮ್ಮಿಂದಾಗುವ ನೆರವು ನೀಡುವ ಜೊತೆಗೆ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಭಕ್ತರು ತೆರಳಲು ಸುಸ್ಸಜ್ಜಿತವಾದ ರಸ್ತೆಯನ್ನು ನಿರ್ಮಾಣ ಮಾಡಲು ಸರ್ಕಾರದ ಅನುದಾನದ ಜತೆಗೆ ನಾನೂ ವೈಯಕ್ತಿಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ದೇವಾಲಯದ ಆವರಣದಲ್ಲಿ ಮೂರು ಎಲ್.ಇ.ಡಿ ದೀಪಗಳನ್ನು ಅಳವಡಿಸುವ ಕಾರ್ಯ ಶೀಘ್ರದಲ್ಲೆ ಹಮ್ಮಿಕೊಳ್ಳಲಾಗುವುದು ಎಂದರು.
ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಪ್ರತಿ ಶನಿವಾರ ದೇವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಅನೇಕ ಭಕ್ತರು ಒಪ್ಪೊತ್ತು(ಉಪವಾಸ) ಇದ್ದು ದವರ ದರ್ಶನಕ್ಕೆ ಬಂದು ಪೂಜೆ ಸಲ್ಲಿಸಿ ಮನೆಗೆ ತೆರಳಿದ ನಂತರವೇ ಊಟ ಸೇವಿಸುತ್ತಾರೆ.
ಅನೇಕ ಭಕ್ತರು ದೂರದೂರಿನಿಂದ ಬರುತ್ತಾರೆ. ಹಿರಿಯ ವಯೋ ವೃದ್ಧ ಭಕ್ತರೂ ಇರುತ್ತಾರೆ. ಅನೇಕ ಮಂದಿ ಹೋಟೆಲ್ ಗಳಲ್ಲಿ ಊಟ ತಿಂಡಿ ಮಾಡುವುದಿಲ್ಲ. ದೇವರ ಪ್ರಸಾದವನ್ನು ಮಾತ್ರವೇ ಸೇವಿಸುತ್ತಾರೆ.
ಅಂತಹ ಎಲ್ಲ ಭಕ್ತರಿಗೂ ದೇವಾಲಯದಲ್ಲೆ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುವುದು ಎಂದರು.
ವರ್ಷದಲ್ಲಿ 48 ಶನಿವಾರಗಳು ಬರಲಿದ್ದು 4 ಶನಿವಾರಗಳು ನಮ್ಮ ಎಬಿಡಿ ಟ್ರಸ್ಟ್ ಮೂಲಕವೇ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡುತ್ತೇವೆ. ಇನ್ನುಳಿದ 44 ವಾರವೂ ಭಕ್ತರು, ದಾನಿಗಳು ಹಾಗೂ ದೇವಾಲಯದ ವ್ಯವಸ್ಥಾಪನಾ ಸಮಿತಿಯಿಂದ ವ್ಯವಸ್ಥೆ ಮಾಡೋಣ.
ಒಂದು ವೇಳೆ ಅನಾನುಕೂಲವಾದರೆ ಎಲ್ಲ ವಾರಗಳಲ್ಲೂ ನಡೆಯುವ ಅನ್ನಸಂತರ್ಪಣೆಗೆ ನಮ್ಮ ಎಬಿಡಿ ಟ್ರಸ್ಟ್ ನಿಂದ ನೆರವು ನೀಡಿ ನಿರಂತರವಾಗಿ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡೋಣ, ಅನ್ನದಾನದಂತ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಭಗವಂತ ನನಗೆ ಕೊಟ್ಟಿರುವುದು ನನ್ನ ಜನ್ಮದ ಪುಣ್ಯ ಎಂದರು.
ದೇವಾಲಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಿ.ಪಿ.ನಾಗರಾಜ್, ನಿರ್ದೇಶಕರಾದ ಅಶ್ವಥ್ ನಾರಾಯಣರೆಡ್ಡಿ, ಜಿ.ಕುರುಬರಹಳ್ಳಿ ಶ್ರೀನಿವಾಸ್ ರೆಡ್ಡಿ, ಎ.ನಾಗರಾಜ್, ಮುಖಂಡ ಟಿ.ಕೆ.ನಟರಾಜ್, ಡಿ.ವಿ.ವೆಂಕಟೇಶ್, ಕೆ.ಗುಡಿಯಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಗಂಜಿಗುಂಟೆ ಮೌಲ ಹಾಜರಿದ್ದರು.