Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸೋಮವಾರ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ (Teachers Day) ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ “ಜಿಲ್ಲೆಯಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಕಳೆಪೆ ಆಗಿದ್ದು ಶಿಕ್ಷಕರು ಫಲಿತಾಂಶ ಉತ್ತಮಪಡಿಸಲು ಶ್ರಮವಹಿಸಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಡಿಜಿಟಲ್ ಬೋರ್ಡ್, ಸ್ಮಾರ್ಟ್ ಟಿವಿ ಮತ್ತಿತರ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಸಾಮಾಜಿಕ ಹೊಣೆಗಾರಿಕೆ ನಿಧಿ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಬೋಧಕೇತರ ಸಿಬ್ಬಂದಿ ನೇರ ನೇಮಕಾತಿಗೂ ಆದೇಶಿಸಿದೆ. ಸುಸ್ಥಿರ ದೇಶ, ಸಮಾಜ ಕಟ್ಟುವ ಮುಖ್ಯ ಕೆಲಸ ಶಿಕ್ಷಕರ ಮೇಲಿದೆ. ಎಲ್ಲಾ ವೃತ್ತಿಗಿಂತ ಶಿಕ್ಷಕರ ವೃತ್ತಿಗೆ ಸಮಾಜದಲ್ಲಿ ಅಪಾರವಾದ ಗೌರವವಿದೆ. ಆ ಗೌರವ, ವೃತ್ತಿ ಧರ್ಮ, ಗುರು ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು”ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಸಾಕ್ಷರತಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ, ಉಪನಿರ್ದೇಶಕ (ಅಭಿವೃದ್ಧಿ) ಮುನಿಕೆಂಪೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶಶಿಧರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ರೋಟರಿ ಕ್ಲಬ್ ಗೌರ್ನರ್ ಮಹದೇವ ಪ್ರಸಾದ್, ಸುಂದರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಜಿ.ಹರೀಶ್, ತಾ.ಪಂ ಇಒ ಮಂಜುನಾಥ್, ಪೆರೇಸಂದ್ರ ಎಂ.ವಿ.ಎಸ್.ಶಾಲೆಯ ನಾಗಭೂಷಣ್ ಪಾಲ್ಗೊಂಡಿದ್ದರು.