Gudibande : ಬುಧವಾರ ಗುಡಿಬಂಡೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು (Teachers Day) ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಇಸ್ರೊ ಹಿರಿಯ ವಿಜ್ಞಾನಿ ಜೆ.ಸಿ. ಗುರಪ್ಪ ” ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಬೋಧಿಸಬೇಕು. ನಾನು ಇದೇ ತಾಲ್ಲೂಕು ಜಂಗಾಲಹಳ್ಳಿಯಲ್ಲಿ ಜನಿಸಿದ್ದು, ಪ್ರಾಥಮಿಕ ಶಿಕ್ಷಣ ಇದೇ ಕುಗ್ರಾಮದಲ್ಲಿ ಕಲಿತಿದ್ದೆ. ಗುಡಿಬಂಡೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪೂರೈಸಿದೆ. ಈಗ ಇಸ್ರೊ ನಿಯಂತ್ರಣ ವಿಭಾಗದಲ್ಲಿ ವ್ಯವಸ್ಥಾಪಕನಾಗಿದ್ದು, ಚಂದ್ರಯಾನ–3ರ ವಿಕ್ರಮ್(ಲ್ಯಾಂಡರ್) 16 ದಿನ ಕಾರ್ಯ ನಿರ್ವಹಿಸಿದ್ದು, ಮತ್ತೆ ಅದಕ್ಕೆ ಚಾಲನೆ ಸಿಗುವ ಅವಕಾಶವಿದೆ ” ಎಂದರು.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನಿವೃತ ಶಿಕ್ಷಕರು ಮತ್ತು ಜಿಲ್ಲಾ ಮಟ್ಟದ ಶಿಕ್ಷಕರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಬೈಲಾಂಜನಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಷೀರಾ, ಉಪಾಧ್ಯಕ್ಷ ಎ.ವಿಕಾಸ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಸಾಪ ಅಧ್ಯಕ್ಷ ಸುಬ್ಬರಾಯಪ್ಪ, ಬಾಲಾಜಿ, ಲಕ್ಷ್ಮಿನರಸಿಂಹಗೌಡ, ತಹಶೀಲ್ದಾರ್ ಮನಿಷಾ, ಇಒ ಹೇಮಾವತಿ, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ಪಟ್ಟಣ ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಮುಖಂಡರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.