Chikkaballapur : ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯ ಅರ್ಹ ನಿವೇಶನ ರಹಿತರನ್ನು ವಾಜಪೇಯಿ ನಿವೇಶನ ಯೋಜನೆಯಡಿ (Vajpayee Housing Scheme) ಆಯ್ಕೆ ಮಾಡುವ ಸಂಬಂಧ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ವಾರ್ಡ್ ಸಭೆಯನ್ನು (Ward Meeting) ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್ “ಪರಿಶಿಷ್ಟ ಜಾತಿಯ 440, ಪರಿಶಿಷ್ಟ ವರ್ಗದ 113, ಹಿಂದುಳಿದ ವರ್ಗದ 842 ಮತ್ತು ಅಲ್ಪಸಂಖ್ಯಾತ 870 ಕುಟುಂಬಗಳು ಸೇರಿದಂತೆ ಒಟ್ಟಾರೆ 2,270 ಮಂದಿಗೆ ನಿವೇಶನ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ನಗರ ವ್ಯಾಪ್ತಿಯ ಐದು ಸಾವಿರ ನಿವೇಶನ ರಹಿತರಿಗೆ ಉಚಿತ ನಿವೇಶನ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ಪ್ರಸ್ತುತ ಸಾಲಿನಲ್ಲಿ ನಿವೇಶನ ಪಡೆಯುತ್ತಿರುವ ಎಲ್ಲರಿಗೂ ಮುಂದಿನ ವರ್ಷ ಮನೆ ನಿರ್ಮಿಸಿಕೊಡುವ ಪ್ರಯತ್ನ ಮಾಡಲಾಗುವುದು. ಈಗಾಗಲೇ 190 ಎಕರೆ ಭೂಮಿ ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ ಒಟ್ಟು 179 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದೆ” ಎಂದರು.
ಸಭೆಯಲ್ಲಿ ನಗರಸಭಾ ಅಧ್ಯಕ್ಷ ಆನಂದರೆಡ್ಡಿ, ಲೀಲಾವತಿ ಶ್ರೀನಿವಾಸ್, ಅರುಣ್ ಕುಮಾರ್, ಶ್ರೀನಾಥ್, ಕೃಷ್ಣಮೂರ್ತಿ, ಬಾಬು, ನರಸಿಂಹಮೂರ್ತಿ, ಮೊಬೈಲ್ ಬಾಬು, ಶೋಭಾ ರವಿಕುಮಾರ್, ಮುಜಾಮಿಲ್ ಪಾಷಾ ಹಾಜರಿದ್ದರು.