Sidlaghatta : ಶಿಡ್ಲಘಟ್ಟ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪ್ರಕೃತಿ ಮಹಿಳಾ ಬ್ಯುಟೀಷಿಯನ್ ಹಾಗೂ ಟೈಲರ್ಸ್ ಕೌಶಲ್ಯಾಭಿವೃದ್ಧಿ ಸೇವಾ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಯಾವುದೆ ಕುಟುಂಬದ ಅಭಿವೃದ್ಧಿಯಲ್ಲಿ ಪುರುಷರಷ್ಟೆ ಮಹಿಳೆಯರ ಪಾತ್ರವೂ ಇರಲಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ಹೆಣ್ಣು ಕುಟುಂಬದ ಕಣ್ಣಿದ್ದಂತೆ. ಕುಟುಂಬದ ಎಲ್ಲ ಸದಸ್ಯರು ಸರಿದಾರಿಯಲ್ಲಿ ಸಾಗಿ, ಸಮಾಜದಲ್ಲಿ ಒಂದೊಳ್ಳೆ ಹೆಸರು ಮಾಡಿ, ಇತರರಿಗೆ ಮಾದರಿಯಾದ ಬದುಕು ನಡೆಸುವಲ್ಲಿ ಮಹಿಳೆಯರ ಮಾರ್ಗದರ್ಶನ, ಪೋಷಣೆ ಅತಿ ಮುಖ್ಯ ಎಂದರು.
ಕೊರೊನಾದಂತ ಕಠಿಣ ಪರಿಸ್ಥಿತಿಯಲ್ಲೂ ಗ್ರಾಮೀಣ ಭಾಗದ ಅನೇಕರು ಹೈನುಗಾರಿಕೆ, ಕುರಿ ಮೇಕೆ ಸಾಕಣೆ ಕೂಲಿಯಿಂದ ಕುಟುಂಬವನ್ನು ಪೋಷಿಸಿ ಸೈ ಎನಿಸಿಕೊಂಡಿದ್ದಾರೆ. ಟೈಲರಿಂಗ್ ಬ್ಯುಟೀಷಿಯನ್ ನಂತ ಸ್ವಯಂ ಉದ್ಯೋಗದಿಂದ ಬದುಕನ್ನು ಕಟ್ಟಿಕೊಂಡಿರುವರು. ಇಂತಹ ಎಲ್ಲ ಹೆಣ್ಣುಮಕ್ಕಳಿಗೂ ಹೊಲಿಗೆ ಯಂತ್ರಗಳನ್ನು ವಿತರಿಸುವ ಕೆಲಸವನ್ನು ನಾನು ಸ್ವಂತ ಹಿತಾಸಕ್ತಿಯಿಂದ ಮುಂದಿನ ಎರಡು ತಿಂಗಳೊಳಗೆ ಮಾಡಲಿದ್ದೇನೆ ಎಂದು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಯಾರು ಬ್ಯುಟೀಷಿಯನ್ ಕೋರ್ಸ್‌ನ ತರಬೇತಿ ಪಡೆಯಲು ಇಚ್ಚಿಸುತ್ತಿರೋ ಅವರೆಲ್ಲರೂ ಬ್ಯಾಂಕ್‌ನಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ, ಎಲ್ಲರಿಗೂ ಉಚಿತ ತರಬೇತಿಗೆ ವ್ಯವಸ್ಥೆ ಮಾಡುತ್ತೇನೆ. ಹಾಗೆಯೆ ಸಂಘದ ಎಲ್ಲ ಸದಸ್ಯರಿಗೂ ಹೊಲಿಗೆ ಯಂತ್ರಗಳನ್ನು ಬ್ಯಾಂಕಿನಿಂದ ಉಚಿತ ವಿತರಣೆ ಮಾಡುವ ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾಲ್ಫಿನ್ ನಾಗರಾಜ್ ಮಾತನಾಡಿ, ಇದೀಗ ಹಣ ಇದ್ದವರೆಲ್ಲರೂ ದಿನಸಿ ಕಿಟ್‌ಗಳನ್ನು ಕೊಡುವ ನೆಪದಲ್ಲಿ ತಾಲ್ಲೂಕಿನಲ್ಲಿ ರಾಜಕೀಯ ಆರಂಭಿಸಲು ಬರುತ್ತಿದ್ದಾರೆ. ಅದೆಲ್ಲರೂ ತಾತ್ಕಾಲಿಕವಷ್ಟೆ. ಯಾರು ಸ್ಥಳೀಯವಾಗಿ ನೆಲೆಸಿ, ಜನರ ಮದ್ಯೆ ಇರುತ್ತಾರೋ ಅವರನ್ನು ಆಯ್ಕೆ ಮಾಡಿದರೆ ನಿಮ್ಮೆಲ್ಲರ ಬದುಕು ಉತ್ತಮವಾಗುತ್ತದೆ. ಇಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು ಕಾರ್ಖಾನೆಯನ್ನು ಆರಂಭಿಸಲು ಶಾಸಕ ವಿ.ಮುನಿಯಪ್ಪ ಅವರು ನಿರ್ಧರಿಸಿದ್ದು ಶೀಘ್ರದಲ್ಲೆ ಆ ಕಾರ‍್ಯ ಆರಂಭವಾಗಲಿದೆ ಎಂದು ಹೇಳಿದರು.
ನಗರಸಭಾ ಸದಸ್ಯೆ ಚೈತ್ರಾ ಮನೋಹರ್, ಮಹಿಳಾ ಹೋರಾಟಗಾರ್ತಿ ಕವಿತಾರೆಡ್ಡಿ, ಪ್ರಕೃತಿ ಮಹಿಳಾ ಬ್ಯುಟೀಷಿಯನ್ ಸಂಘದ ಅಧ್ಯಕ್ಷೆ ಎಸ್.ರಾಧ, ಕಾರ‍್ಯದರ್ಶಿ ಶೈಲ, ಗೌರವಾಧ್ಯಕ್ಷೆ ಭಾಗ್ಯಮ್ಮ, ಖಜಾಂಚಿ ರೇಖಾ, ವೆಂಕಟಲಕ್ಷ್ಮಮ್ಮ, ಶಾರದಾ, ವರಲಕ್ಷ್ಮಮ್ಮ, ಮುನೀಂದ್ರ, ಮಂಜುಳಮ್ಮ, ಮಧುಲತ, ಯಾಸ್ಮೀನ್ ತಾಜ್, ಗಾಯಿತ್ರಿ, ಪುಷ್ಪ ಅಮರನಾಥ್, ಹಾಜರಿದ್ದರು.