Sidlaghatta: ಶಾಲಾ ಕಾಲೇಜು ಮಕ್ಕಳಲ್ಲಿ ಆಡಳಿತ, ರಾಜಕೀಯ, ಅಭಿವೃದ್ದಿ, ನಾಯಕತ್ವದ ಪ್ರಜ್ಞೆಯನ್ನು ಮೂಡಿಸಬೇಕು. ಅವರು ಮುಂದಿನ ದಿನಗಳಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಆಡಳಿತಗಾರರಾಗಬಲ್ಲರು ಎಂದು ತಾಲ್ಲೂಕು ಪಂಚಾಯಿತಿ ಇಒ ಜಿ. ಮುನಿರಾಜ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯ ಆಡಳಿತ ವ್ಯವಸ್ಥೆಯಾದ ಗ್ರಾಮ ಪಂಚಾಯಿತಿ, ನಗರಸಭೆ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ, ವಿಧಾನಸೌಧ, ಸಂಸತ್‌ನಲ್ಲಿ ಜನಪ್ರತಿನಿಧಿಗಳು ಪ್ರತಿನಿಧಿಸುವ ರೀತಿ, ಆಡಳಿತದಲ್ಲಿ ಭಾಗವಹಿಸುವಿಕೆ ಮುಂತಾದ ವಿಷಯಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು.
ಶಾಲಾ ಕಾಲೇಜು ಹಂತದಲ್ಲೆ ಸ್ಥಳೀಯವಾಗಿ ಇರುವ ಸಮಸ್ಯೆಗಳ ಅರಿವು ವಿದ್ಯಾರ್ಥಿಗಳಿಗೆ ಇರಬೇಕು. ಅವುಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿದಂತೆ ಆಡಳಿತದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸುವವರು ಯಾವ ರೀತಿ ನಿಭಾಯಿಸುತ್ತಾರೆ ಎಂಬುದರ ಬಗ್ಗೆಯೂ ತಿಳುವಳಿಕೆ ಅಗತ್ಯ ಎಂದರು.
ಸದನದಲ್ಲಿ ಜನಪ್ರತಿನಿಧಿಗಳು ರಾಜ್ಯದ ಸಮಸ್ಯೆಗಳನ್ನು ಬಿಂಬಿಸುವುದು, ಅವುಗಳ ಬಗ್ಗೆ ಅಧಿಕಾರದಲ್ಲಿರುವ ಪಕ್ಷದ ಸದಸ್ಯರು ಹಾಗೂ ವಿರೋಧ ಪಕ್ಷದಲ್ಲಿರುವ ಸದಸ್ಯರು ನಿಭಾಯಿಸುವ ಮತ್ತು ಇಡೀ ಸದನವನ್ನು ಸಭಾಧ್ಯಕ್ಷರು ನಿರ್ವಹಿಸುವುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಪ್ರಯತ್ನವೇ ಈ ಯುವ ಸಂಸತ್ ಸ್ಪರ್ಧೆ.
ರಾಜ್ಯದಲ್ಲಿ ಎಲ್ಲ ತಾಲ್ಲೂಕುಗಳಲ್ಲೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಪರ್ಧೆ ನಡೆಸಿ ವಿದ್ಯಾರ್ಥಿಗಳೆ ಸಭಾಧ್ಯಕ್ಷರು, ಮುಖ್ಯ ಮಂತ್ರಿಗಳು, ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷಗಳ ಸದಸ್ಯರ ಪಾತ್ರವಹಿಸಿ ಅನುಭವ ಪಡೆಯಲಿದ್ದಾರೆ ಎಂದು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಪರ್ಧೆ ಏರ್ಪಡಿಸುವ ಮೂಲಕ ಸಂಸತ್ ನ ಕಾರ್ಯಕಲಾಪಗಳು, ಆಡಳಿತ ವ್ಯವಸ್ಥೆ, ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ಪಾತ್ರ ಕುರಿತಾಗಿ ಜ್ಞಾನ ಅರಿವು ಬರುವ ಪ್ರಯತ್ನಇದರಿಂದ ಆಗಲಿದೆ ಎಂದು ಯುವ ಸಂಸತ್ ಸ್ಪರ್ಧೆಯ ಉಪಯೋಗದ ಬಗ್ಗೆ ವಿವರಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆ, ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆ, ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆ, ಚೀಮಂಗಲ, ತುಮ್ಮನಹಳ್ಳಿ, ಮೇಲೂರು, ಗಂಜಿಗುಂಟೆ, ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎಚ್.ಸಿ.ಮುನಿರಾಜು, ಮಳ್ಳೂರು ವಿವೇಕಾನಂದ ಪಿಯು ಕಾಲೇಜಿನ ಸೌಮ್ಯ, ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.
ವಿಷಯ ಪರಿವೀಕ್ಷಕ ಭಾಸ್ಕರ್‌ಗೌಡ, ಚಿತ್ರಕಲಾ ಶಿಕ್ಷಕ ಸತೀಶ್, ಎಲ್.ವಿ.ವೆಂಕಟರೆಡ್ಡಿ, ಶಂಕರಪ್ಪ ಹಾಜರಿದ್ದರು.