Sidlaghatta : ಶಿಡ್ಲಘಟ್ಟ ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಚಿಂತನ ಮಂಥನ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಮತ್ತು ಸ್ಥಳೀಯ ಸಂಸ್ಥೆಗಳ (ಜಿ.ಪಂ ಮತ್ತು ತಾ.ಪಂ) ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ನಾಯಕತ್ವದ ಕುರಿತಾಗಿ ಚರ್ಚಿಸಲು ಕಾರ್ಯಕರ್ತರನ್ನು ಆಹ್ವಾನಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸಲು ಮತ್ತು ಹತ್ತು ವರ್ಷಗಳ ನಂತರ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಜೆಡಿಎಸ್ ಪಕ್ಷದ ತಂತ್ರಕ್ಕೆ ಪ್ರತಿತಂತ್ರವನ್ನು ರೂಪಿಸುವ ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಂದುಕೊಂಡು ಪಕ್ಷ ಸಂಘಟನೆ ಮಾಡಲು ನಾಯಕತ್ವ ಅಗತ್ಯವಾಗಿದೆ ಎಂದು ಸಭೆಯಲ್ಲಿ ಒಕ್ಕೊರಲಿನಿಂದ ಪ್ರಸ್ತಾಪವಾಯಿತು.
ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಮುತ್ತೂರು ಚಂದ್ರೇಗೌಡ ಅವರು ಮಾತನಾಡುವ ವೇಳೆಯಲ್ಲಿ, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಂಜಿನಪ್ಪ ಪುಟ್ಟು ಕಣಕ್ಕೆ ಇಳಿದ ಪರಿಣಾಮ ಕಾಂಗ್ರೆಸ್ ಪಕ್ಷದ ಮತಗಳು ಚದುರಿಹೋದವು. ಹಾಗಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋತರು ಎಂದಾಗ ಸಭೆಯಲ್ಲಿ ನೆರೆದಿದ್ದ ರಾಜೀವ್ ಗೌಡ ಬೆಂಬಲಿಗರು, ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆಗೊಂಡಿರುವ ವ್ಯಕ್ತಿಯ ವಿಚಾರ ಇಲ್ಲಿ ಪ್ರಸ್ತಾಪಿಸುವುದು ಅನಗತ್ಯ ಎಂದು ಆಕ್ಷೇಪಿಸಿದರು.
ಇದೇ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯರ್ತರು ಮತ್ತು ರಾಜೀವ್ ಗೌಡ ಬೆಂಬಲಿಗರ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಸಭೆಯಲ್ಲಿ ಗೊಂದಲ, ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಗಿ, ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯದಾಯಿತು. ಇದರಿಂದ ಬೇಸತ್ತ ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಜಿ.ಪಂ ಮಾಜಿ ಅಧ್ಯಕ್ಷ ಸುಬ್ರಮಣಿ ಮೊದಲಾದ ಮುಖಂಡರು ಸಭೆಯಿಂದ ಹೊರಬಂದರು. ಮುಖಂಡರು ಸಭೆಯಿಂದ ಹೊರ ಹೋದರೂ ಸಹ, ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಮತ್ತು ಕಿರುಚಾಟದಲ್ಲಿ ತೊಡಗಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಲೂರು ಮುರಳಿ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಭೀಮೇಶ್, ನಿರಂಜನ್ ಮತ್ತಿತರರು ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಗುಂಪುಗಾರಿಕೆಯಿಂದ ಗೊಂದಲದ ವಾತಾವರಣ ನಿರ್ಮಾಣವಾಗಿ ಇದೀ ರಾಜ್ಯದಲ್ಲಿ ಕಾಂಗ್ರೆಸ್ ವಿಜೇತರಾಗಿ ಹೊರಹೊಮ್ಮಿದರೆ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನ ಪಡೆಯಿತು. ಹಾಗಾಗಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಲು ಸಂಘಟಿತರಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿಯನ್ನು ಡಾ.ಎಂ.ಸಿ.ಸುಧಾಕರ್ ಅವರಿಗೆ ನೀಡುವ ಸಾಧ್ಯತೆ ಹೆಚ್ಚಿದೆ. ಅವರ ನೇತೃತ್ವದಲ್ಲಿ ಬರುವ ಚುನಾವಣೆಯನ್ನು ಎದುರಿಸಲು ಸಜ್ಜಾಗಬೇಕೆಂದು ಮುಖಂಡರು ಮನವೊಲಿಸಿ ಗೊಂದಲದ ವಾತಾವರಣವನ್ನು ತಿಳಿಗೊಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಯಾಸ್ಮೀನ್ ತಾಜ್, ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಲೂರು ಮುರಳಿ, ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, ಜಿ.ಪಂ ಮಾಜಿ ಅಧ್ಯಕ್ಷ ಸುಬ್ರಮಣಿ, ನಗರಸಭಾ ಉಪಾಧ್ಯಕ್ಷ ಅಫ್ಸರ್ ಪಾಷ, ಟಿ ಕೆ ನಟರಾಜ್, ಪಂಪ್ ನಾಗರಾಜ್, ಕೋಲಾರ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಭಕ್ತರಹಳ್ಳಿ ಮುನೇಗೌಡ, ಎನ್.ಮುನಿಯಪ್ಪ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ನಿರಂಜನ್, ಚಿದಾನಂದ ಮೂರ್ತಿ, ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ, ನಡಂಪಲ್ಲಿ ಶ್ರೀನಿವಾಸ್ ಹಾಜರಿದ್ದರು.