Sugaturu, Sidlaghatta : ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಆಯಾ ರೈತಸಂಪರ್ಕ ಕೇಂದ್ರಗಳ ವ್ಯಾಪ್ತಿಗೆ ನಿಯೋಜನೆಗೊಂಡಿರುವ ಚಿಂತಾಮಣಿ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ರೈತ ಸಮುದಾಯಕ್ಕೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ರೈತರಿಗೆ ಕೃಷಿ ತಾಂತ್ರಿಕತೆಯ ಬಗ್ಗೆ ಅರಿವು ಮೂಡಿಸಿ ತಜ್ಞರಿಂದ ಅರಿವು ಮೂಡಿಸಿ ಉತ್ತಮ ಆದಾಯದಾಯಕ ರೇಷ್ಮೆಕೃಷಿಗೆ ಸಹಕರಿಸಬೇಕು ಎಂದು ಚಿಂತಾಮಣಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎನ್.ಟಿ.ನರೇಶ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಚಿಂತಾಮಣಿ ರೇಷ್ಮೆ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ಮೂರು ತಿಂಗಳ ಕಾಲ ರೈತರ ಜಮೀನುಗಳ ಮಣ್ಣುಪರೀಕ್ಷೆ, ಪಶು ಆರೋಗ್ಯ ತಪಾಸಣೆ, ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಕೃಷಿ ವಿಧಾನಗಳ ಅರಿವು ಮೂಡಿಸುವುದು. ಮತ್ತಿತರ ಕೃಷಿ ಮತ್ತು ರೈತರ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರೈತರು ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ.ನವೀನ್ ಮಾತನಾಡಿ, ಶಿಬಿರದ ವೇಳೆ ಆಗಿಂದಾಗ್ಗೆ ಮಣ್ಣು ಪರೀಕ್ಷೆಯ ಪಾರತ್ಯಕ್ಷಿಕೆ, ಮಣ್ಣಿನ ಮಾದರಿ ತೆಗೆಯುವ ವಿಧಾನ, ರೈತರು ಉತ್ತಮ ಇಳಿವರಿ ಪಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾಕ್ರಮಗಳು, ಮಣ್ಣಿನ ಸೂಕ್ತ ಪರೀಕ್ಷೆಯ ಲಾಭಗಳು, ಮಣ್ಣಿನ ಗುಣಮಟ್ಟ ವೃದ್ಧಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲಾಗುವುದು. ಸ್ಥಳೀಯವಾಗಿ ಲಭ್ಯ ಮಣ್ಣಿನ ಗುಣಮಟ್ಟಕ್ಕನುಗುಣವಾಗಿ ಆದಾಯದಾಯಕ ಕೃಷಿ ಇಂದಿನ ಅಗತ್ಯ ಎಂದರು.
ಸಹಾಯಕ ಪ್ರಾಧ್ಯಾಪಕಿ ಡಾ.ರಮ್ಯಶ್ರೀ ಮಾತನಾಡಿ, ಅನೇಕ ರೈತರು ಕೈಗೊಳ್ಳುವ ಕೃಷಿ, ಬೆಳೆಗಳಲ್ಲಿ ಲೋಪಗಳು ಕಂಡುಬರುತ್ತವೆ. ಪೋಷಕಾಂಶಗಳ ಕೊರತೆ, ಬೆಳಗಳಿಗೆ ಕಾಡುವ ರೋಗಗಳು ಮತ್ತು ಕೀಟಬಾಧೆಗಳ ನಿರ್ವಹಣೆ, ಕೃಷಿ ತಂತ್ರಜ್ಞಾನಗಳ ಅರಿವು ರೈತರಿಗೆ ಸೂಕ್ತ ವೇಳೆಯಲ್ಲಿ ಲಭ್ಯವಾದರೆ ರೈತರ ಕೃಷಿ ಆದಾಯವನ್ನು ಹೆಚ್ಚಿಸಬಹುದಾಗಿದೆ ಎಂದರು.
ರೈತರಿಗೆ ಮಣ್ಣುಪರೀಕ್ಷೆಯ ಕ್ರಮಗಳು, ವಿವಿಧ ಬೆಳೆಗಳ ಹೊಸತಳಿಗಳ, ವೈಜ್ಞಾನಿಕ ಕೃಷಿ ಪದ್ಧತಿಗಳು, ಪಶುಸಂಗೋಪನೆ, ರಾಸುಗಳ ನಿರ್ವಹಣೆ, ಶುದ್ಧ ಗುಣಮಟ್ಟದ ಹಾಲು ಉತ್ಪಾದನೆ, ಕುರಿಮೇಕೆಗಳಲ್ಲಿ ಜಂತುಹುಳು ನಿವಾರಣೆ, ರೇಷ್ಮೆ ಕೃಷಿ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶನ, ಉಪನ್ಯಾಸ ನಡೆಯಿತು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣಗೌಡ, ಕಾರ್ಯದರ್ಶಿ ಗಿರೀಶ್, ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ಗುತ್ತಿಗೆದಾರ ದೇವರಾಜು, ಗ್ರಾಮಸ್ಥರಾದ ಮಧುಸೂಧನ್, ಆಂಜನೇಯರೆಡ್ಡಿ, ಕಾರ್ಯಾನುಭವ ಶಿಬಿರಾರ್ಥಿ ಭಾರ್ಗವ್ ವೇದಾಂತ್, ಪಾವನಿ, ಪೂಜಾ, ವಿಸ್ಮಯ, ಪ್ರೇಮಾ, ಪ್ರತ್ಯುಷಾ, ರಶ್ಮಿ, ಚಿತ್ರಾ, ಪೂರ್ವಿಕ್ಗೌಡ, ಪ್ರಭುರಾಜ್, ಪೃಥ್ವಿ, ರಾಜು, ರವಿಕುಮಾರ್, ಸಾಬಯ್ಯ, ರೈತರು ಪಾಲ್ಗೊಂಡಿದ್ದರು.