Channarayanapalli, Bagepalli : ಬಾಗೇಪಲ್ಲಿ ತಾಲ್ಲೂಕಿನ ಚನ್ನರಾಯನಪಲ್ಲಿ ಗ್ರಾಮದಲ್ಲಿ ಸೋಮವಾರ ಗ್ರಾಮದೇವತೆ ಮಾರಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ಸಡಗರದಿಂದ ನಡೆಯಿತು.
ಈ ಅಂಗವಾಗಿ ಗಂಗೆ ಪೂಜೆ, ಕಳಶಸ್ಥಾಪನೆ, ಗಣಪತಿ ಪೂಜೆ, ನವಗ್ರಹ ಆರಾಧನೆ, ಗಣಪತಿ ಹೋಮ, ರಾಕ್ಷುಸೋಪ್ನ ಹೋಮ, ಜಲಾಧಿವಾಸ, ಪುಷ್ಪಾಧಿವಾಸ, ನವಗ್ರಹ ಮೂಲಮಂತ್ರ, ಪ್ರಧಾನ ದೇವರ ಹೋಮ, ಗೋಪೂಜೆ, ಪ್ರಾಣಪ್ರತಿಷ್ಠಾಪನೆ, ವಾಸ್ತುಬಲಿ, ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸಿದರು. ದೇವಿಗೆ ಹೂವಿನ ಅಲಂಕಾರ ಮತ್ತು ವಿದ್ಯುತ್ ದೀಪಾಲಂಕಾರದಿಂದ ದೇಗುಲ ಆವರಣ ಸುಂದರವಾಗಿತ್ತು.
ಗ್ರಾಮದ ಮುಖ್ಯದ್ವಾರದಲ್ಲಿ ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಮತ್ತು ಹೆಣ್ಣುಮಕ್ಕಳು ತಂಬಿಟ್ಟಿನ ದೀಪದಾರತಿ ಬೆಳಗಿಸಿ ದೇವರಿಗೆ ಪೂಜೆ ಸಲ್ಲಿಸಿದರು. ತಮಟೆಗಳ ಘೋಷದೊಂದಿಗೆ ಗ್ರಾಮದ ಬೀದಿಗಳಲ್ಲಿ ಮಾರಮ್ಮ ದೇವಿಯ ಮೆರವಣಿಗೆ ನಡೆಸಲಾಯಿತು.
ಭಕ್ತರು ದೇವಿಗೆ ಅರಿಶಿಣ, ಕುಂಕುಮ, ನೈವೇದ್ಯ, ನಿಂಬೆಹಣ್ಣುಗಳನ್ನು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಪವಿತ್ರ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಪೂಜೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.
ನಾಗರಾಜು, ಶ್ರೀನಿವಾಸ್, ನಾಗಯ್ಯ, ಶಿವಪ್ಪ, ರಾಮಾಂಜಿ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಈ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.