Bagepalli : ಬಾಗೇಪಲ್ಲಿ ಪಟ್ಟಣದಲ್ಲಿ ಮಂಗಳವಾರ CPM ಜಿಲ್ಲಾ ಸಮಿತಿಯಿಂದ ಸ್ವಾಗತ ಸಮಿತಿ ರಚನೆ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ಸಿದ್ದಗಂಗಪ್ಪ, ಗೌರವಾಧ್ಯಕ್ಷರಾಗಿ ಡಾ.ಅನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಪಿ.ಮುನಿವೆಂಕಟಪ್ಪ, ಖಜಾಂಚಿಯಾಗಿ ಎಂ.ಎನ್.ರಘುರಾಮರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ “ಬಾಗೇಪಲ್ಲಿಯ ಕೊಂಡಂವಾರಿಪಲ್ಲಿ ಗ್ರಾಮದ ಎಸ್‍ಎಲ್‍ಎನ್ ಕಲ್ಯಾಣ ಮಂಟಪದಲ್ಲಿ ಸಿಪಿಎಂ ಜಿಲ್ಲಾ ಸಮಿತಿ 18ನೇ ಸಮ್ಮೇಳನ (District Conference) November 21 ಹಾಗೂ 22 ರಂದು ನಡೆಯಲಿದೆ. ಸಿಪಿಎಂ ಪಕ್ಷ ಬಲಿಷ್ಠಗೊಳಿಸಲು, ಕೃಷಿ ಭೂಮಿ ಉಳಿವಿಗೆ, ಕೃಷಿ ಕೂಲಿಕಾರ್ಮಿಕರ ಸಮಸ್ಯೆ, ಬಯಲುಸೀಮೆಗೆ ಕೃಷ್ಣಾ ನದಿ ನೀರು ಹರಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿಗೆ ಒಂದು ಕಲಾ ಜಾಥಾ ಹಾಗೂ ಗುಡಿಬಂಡೆ, ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳಿಗೆ ಒಂದು ಸಾಂಸ್ಕೃತಿಕ ಜಾಥಾಗಳ ಮೂಲಕ ಜನರನ್ನು ಸಂಘಟಿಸಬೇಕಾಗಿದೆ. ಕರಪತ್ರ, ಪೋಸ್ಟರ್, ಗೋಡೆಬರಹ ಬರೆಸುವುದು, ಕೆಂಪು ವಸ್ತ್ರಧಾರಿ ಪಡೆ ರಚನೆ ಮಾಡಬೇಕು. ಪಕ್ಷದ ಮುಖಂಡರ, ಕಾರ್ಯಕರ್ತರ ಮನೆ ಮುಂದೆ ಕೆಂಪು ಬಾವುಟ ಹಾರಿಸಬೇಕು” ಎಂದು ತಿಳಿಸಿದರು.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಬಿಳ್ಳೂರು ನಾಗರಾಜು, ಬಿ.ಸಾವಿತ್ರಮ್ಮ, ಬಿ.ಎನ್.ಮುನಿಕೃಷ್ಣಪ್ಪ, ನಗರ ಸಮಿತಿ ಕಾರ್ಯದರ್ಶಿ ವಾಲ್ಮೀಕಿ ಅಶ್ವತ್ಥಪ್ಪ, ಎಚ್.ಎ.ರಾಮಲಿಂಗಪ್ಪ, ಚನ್ನರಾಯಪ್ಪ, ದೇವಿಕುಂಟೆ ಶ್ರೀನಿವಾಸ್, ಜಿ.ಎಂ.ಲಕ್ಷ್ಮಿದೇವಮ್ಮ, ಜಿ.ಮುಸ್ತಾಫ, ಚಂಚುರಾಯನಪಲ್ಲಿ ಕೃಷ್ಣಪ್ಪ, ಬಿ.ಎಚ್.ರಫೀಕ್, ರಾಮಾಂಜಿ, ಜಿ.ಕೃಷ್ಣಪ್ಪ, ಕೆ.ಮುನಿಯಪ್ಪ ಉಪಸ್ಥಿತರಿದ್ದರು.