Bagepalli : 2025- 26ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ (Mahatma Gandhi National Rural Employment Guarantee Scheme (MGNREGS)) ಸಂಬಂಧಿಸಿದ ಕಾರ್ಮಿಕ ಅಯವ್ಯಯ (Budget) ತಯಾರಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶದಂತೆ ಪ್ರಕ್ರಿಯೆಯನ್ನು ಸಮಯದೊಳಗೆ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದ್ದು ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಮುಖಂಡರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಇಒ ಜಿ.ವಿ.ರಮೇಶ್ ಅವರಿಗೆ ಪಂಚಾಯಿತಿ ಅಧಿಕಾರಿಗಳು ಸುತ್ತೋಲೆಯ ಮಾರ್ಗದರ್ಶನದ ನಿಯಮಗಳಂತೆ ಕಾಟಾಚಾರಕ್ಕೆ ಮಾಡಿದ್ದಾರೆ. ಇದರಿಂದ ಕೃಷಿಕೂಲಿಕಾರರಿಗೆ ತೊಂದರೆ ಆಗಿರುವುದರಿಂದ December 31 ರವರೆಗೂ ಕ್ರಿಯಾಯೋಜನೆಯ ಗಡುವು ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ “ಮಹಾತ್ಮ ಗಾಂಧಿ ನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಾಗಬೇಕಾಗಿದ್ದು ಅಕ್ಟೋಬರ್ 2ರಿಂದ ಒಂದು ತಿಂಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಯೋಜಿಸಲು ಉದ್ದೇಶಿಸಲಾಗಿದೆ. ಅದರಂತೆ ವಾರ್ಡ್ ಸಭೆಯನ್ನು ನವೆಂಬರ್ 15ರ ಒಳಗೆ ಪೂರ್ಣಗೊಳಿಸಲು ತಿಳಿಸಲಾಗಿದೆ. ಹಾಗೂ ಗ್ರಾಮ ಸಭೆಯನ್ನು ನವೆಂಬರ್ 30ರ ಒಳಗೆ ಆಯೋಜಿಸಲು ಸುತ್ತೋಲೆಯಲ್ಲಿ ಇದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಯೋಜನೆಗೆ ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿ ರೈತರಿಗೆ ಕೂಲಿಕಾರರಿಗೆ ಸುತ್ತೋಲೆಯ ಮಾರ್ಗದರ್ಶನದ ನಿಯಮಗಳಂತೆ ವಾರ್ಡ್, ಗ್ರಾಮ ಸಭ ನಡೆಸಿಲ್ಲ. ಯೋಜನೆಯ ಸದುದ್ದೇಶವನ್ನು ನಿರ್ಲಕ್ಷಿಸಿ ತರಾತುರಿಯಲ್ಲಿ ಕ್ರಿಯಾ ಯೋಜನೆಯನ್ನು ತಯಾರು ಮಾಡುತ್ತಿದ್ದಾರೆ. ಕ್ರಿಯಾ ಯೋಜನೆಯ ಗಡುವನ್ನು ಡಿಸೆಂಬರ್ 30 ರವರೆಗೆ ವಿಸ್ತರಣೆ ಮಾಡಬೇಕು. ಬಡವರಿಗೆ ಕೂಲಿಕಾರರಿಗೆ ರೈತರಿಗೆ ದಲಿತರಿಗೆ ಹಾಗೂ ಮಹಿಳಾ ಕೂಲಿಕಾರರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಪ್ರಾಂತ ಕೃಷಿಕೂಲಿಕಾರರ ಸಂಘಟನೆಯ ರಾಜ್ಯ ಸಹಕಾರ್ಯದರ್ಶಿ ಬಿಳ್ಳೂರು ನಾಗರಾಜು, ಮುಖಂಡ ಎಂ.ಎನ್.ರಘುರಾಮರೆಡ್ಡಿ, ಚನ್ನರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು.