Chikkaballapur: ಚಿಕ್ಕಬಳ್ಳಾಪುರ ನಗರದ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಶಾಲೆಯಲ್ಲಿ ಮಂಗಳವಾರ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿದರು.
೬೨೫ ಕ್ಕೆ ೬೨೫ ಅಂಕಪಡೆದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಗ್ರಾಮಾಂತರ ಪ್ರದೇಶದ ಈ ಮಕ್ಕಳ ಸಾಧನೆ ಸಂತೋಷವನ್ನು ತಂದಿದೆ. ಈ ಹಿಂದೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಬೆಂಗಳೂರು ಸೇರಿದಂತೆ ನಗರ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದರು. ಈಗ ಗ್ರಾಮೀಣ ಮಕ್ಕಳು ಈ ಸ್ಥಾನ ಪಡೆಯುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ, ಗ್ರಾಮೀಣ ಮಕ್ಕಳ ಸಾಧನೆ ಪ್ರಶಂಸೆಗೆ ಅರ್ಹ ಎಂದು ಅವರು ಹೇಳಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಕ್ಕಳು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು. ಸಾಧನೆಗೆ ಹಿಗ್ಗದೆ ಮತ್ತಷ್ಟು ಸಾಧಿಸುವ ಛಲವನ್ನು ಬೆಳೆಸಿಕೊಳ್ಳಬೇಕು.ಸನ್ಮಾರ್ಗದಲ್ಲಿ ಬೆಳೆದರೆ ಅವರ ಭವಿಷ್ಯ ಸಹ ಉಜ್ವಲವಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಉನ್ನಮ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿ. ಯಾವುದೇ ವಿಚಾರಕ್ಕೂ ಕುಗ್ಗದೆ ಮುನ್ನುಗ್ಗುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಂಗಳಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯರಾಮ ರೆಡ್ಡಿ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಎನ್ ಶಿವರಾಮರೆಡ್ಡಿ ಉಪಸ್ಥಿತರಿದ್ದರು.