Saturday, March 25, 2023
HomeChikkaballapurಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

- Advertisement -
- Advertisement -
- Advertisement -
- Advertisement -

Chikkaballapur: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಯುಕ್ತಾಶ್ರಯದಲ್ಲಿ ದೇಶದಾದ್ಯಂತ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ (Bharat Bandh) ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರ – Chikkaballapura

ಚಿಕ್ಕಬಳ್ಳಾಪುರ ನಗರದಲ್ಲಿ ಬೆಳಿಗ್ಗೆ 5 ರ ವೇಳೆಗೆ ಪ್ರತಿಭಟನೆ ಆರಂಭವಾಗಿ ಶಿಡ್ಲಘಟ್ಟ ವೃತ್ತದಲ್ಲಿ ರೈತ ಸಂಘ, ಕರವೇ ಯುವ ಸೇವೆ ಹಾಗೂ ಪ್ರಗತಿಪರ ಒಕ್ಕೂಟದ ಸದಸ್ಯರು ಬೆಳಿಗ್ಗೆ ಪಂಜಿನ ಮೆರವಣಿಗೆ ನಡೆಸುವುದರ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಸ್ ಸಂಚಾರ, ವ್ಯಾಪಾರ ವಹಿವಾಟು, ಜನಜೀವನ ಎಂದಿನಂತೆಯೇ ಸಾಗಿತ್ತು . ಕೆಲವು ಅಂಗಡಿಗಳು ಮಧ್ಯಾಹ್ನ ೧೨ ಗಂಟೆಯವರೆಗೂ ಮುಚ್ಚಿದ್ದವಾದರೂ ನಂತರ ವ್ಯಾಪಾರವನ್ನು ಮುಂದುವರೆಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಕೊರೊನಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಕಾಯ್ದೆ ಜಾರಿಗೊಳಿಸಿದೆ. ಈ ಕಾಯ್ದೆಗಳು ಇಡೀ ರೈತ ಕುಲವನ್ನೇ ನಾಶ ಮಾಡಲಿವೆ. ರೈತರ ಪಾಲಿಗೆ ಕರಾಳ ಎನಿಸಿರುವ ಈ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದರು.

ಬಾಗೇಪಲ್ಲಿ – Bagepalli

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಭರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ತಾಲ್ಲೂಕಿನ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಮತ್ತು ಜನಪರ ಸಂಘಟನೆಗಳು ಹಾಗೂ ಜೆಡಿಎಸ್ ಹಾಗೂ ಸಿಪಿಎಂ ಪಕ್ಷಗಳ ಮುಖಂಡರು ಬಂದ್ ಗೆ ಬೆಂಬಲ ನೀಡಿದ್ದರು.

ಬೆಳಿಗ್ಗೆ 6 ಗಂಟೆಗೆ ವಿವಿಧ ಪಕ್ಷ, ಸಂಘಟನೆಗಳ ಬಾವುಟಗಳೊಂದಿಗೆ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ಖಾಸಗಿ ಬಸ್ ಗಳು ಸಂಚಾರ ನಡೆಸದಿದ್ದರೂ, ಸರ್ಕಾರಿ ಬಸ್ ಗಳು ವಿರಳವಾಗಿ ಸಂಚರಿಸಿದವು.

ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜು ರಸ್ತೆ, ಗೂಳೂರು ರಸ್ತೆ, ಟಿ.ಬಿ ಕ್ರಾಸ್ ರಸ್ತೆ ಹಾಗೂ ಬೈಪಾಸ್ ರಸ್ತೆ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾಕಾರರು ಬೈಕ್ ರ‍್ಯಾಲಿ ನಡೆಸಿ ಅಂಗಡಿ ತೆರೆಯದಂತೆ ಹಾಗೂ ವಾಹನ ಸಂಚಾರ ಮಾಡದಂತೆ ಮನವಿ ಮಾಡಿದರು. ಡಾ.ಎಚ್.ಎನ್.ವೃತ್ತದಲ್ಲಿ ಜೆ ಡಿ ಎಸ್, ರೈತ ಸಂಘ, ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಚಿಂತಾಮಣಿ – Chintamani

ಸೋಮವಾರದ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಚಿಂತಾಮಣಿ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಸ್ ಸಂಚಾರ ಎಂದಿನಂತೆ ಇತ್ತು. ಶಾಲಾ ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕುಗಳು, ಪೆಟ್ರೋಲ್ ಬಂಕ್, ಚಲನಚಿತ್ರ ಮಂದಿರಗಳು ತೆರೆದಿದ್ದವು. ಬಹುತೇಕ ಅಂಗಡಿ ಮುಂಗಟ್ಟುಗಳು ಮಿಚ್ಚಿದ್ದವು. ಸರ್ಕಾರಿ ಬಸ್‌ಗಳ ಸಂಚಾರವನ್ನು ತಡೆಗಟ್ಟಲು ಪ್ರತಿಭಟನಾಕಾರರು ಪ್ರಯತ್ನಿಸಿದರಾದರೂ ಪೊಲೀಸರು ಅದನ್ನು ವಿಫಲಗೊಳಿಸಿದರು. ಬಸ್‌ಗಳು ಸಂಚಾರ ನಡೆಸಿದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ಗುಡಿಬಂಡೆ – Gudibande

ಗುಡಿಬಂಡೆಯಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು.

ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದರು. ಖಾಸಗಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತಾದರೂ ಸರ್ಕಾರಿ ಬಸ್ ಮತ್ತು ಆಟೋಗಳು ಕಡಿಮೆ ಸಂಖ್ಯೆಯಲ್ಲಿ ಸಂಚಾರ ನಡೆಸಿದವು. ಶಾಲಾ ಕಾಲೇಜು ಗಳಿಗೆ ಸಂಚಾರ ಮಾಡುವ ವಿದ್ಯಾರ್ಥಿಗಳಿಗೆ ಸಮಸ್ಯೆಯುಂಟಾಯಿತು. ಅಗತ್ಯ ವಸ್ತುಗಳು ಮಾರಾಟ ಮಾಡುವ ಮಳಿಗೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ಗೌರಿಬಿದನೂರು – Gauribidanur

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ ಗೌರೀಬಿದನೂರಿನಲ್ಲಿ ಭಾಗಶಃ ಯಶಸ್ವಿಯನ್ನು ಕಂಡಿತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಬಸ್ ಸಂಚಾರ ಎಂದಿನಂತೆ ಮುಂದುವರೆದಿತ್ತು. ಅಂಗಡಿ ಮಾಲೀಕರು ಮಧ್ಯಾಹ್ನದ ವರೆಗೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚುದ್ದರೂ ನಂತರ ವ್ಯವಹಾರ ಎಂದಿನಂತೆ ಮುಂದುವರೆಯಿತು.

ಶಿಡ್ಲಘಟ್ಟ – Sidlaghatta

ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಗೆ ನಗರ ಸೇರಿದಂತೆ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಶಿಡ್ಲಘಟ್ಟ ನಗರದಲ್ಲಿ ಸೋಮವಾರ ಮುಂಜಾನೆಯಿಂದಲೇ ರೈತ ಮುಖಂಡರೂ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ರಸ್ತೆಗಿಳಿದು ಪಂಜಿನ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಕೆಲ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರಾದರೂ ಬಹುತೇಕ ವ್ಯಾಪಾರ ವಹಿವಾಟು ಎಂದಿನಂತೆ ನಡೆಯುವ ಜೊತೆಗೆ ಬಸ್, ಆಟೋ, ಟ್ಯಾಕ್ಸಿ, ಎಂದಿನಂತೆ ಕಾರ್ಯನಿರ್ವಹಿಸಿದವು.

ಸರ್ಕಾರಿ ಕಚೇರಿಗಳು ಸೇರಿದಂತೆ ಶಾಲಾ ಕಾಲೇಜು, ಗೂಡು ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದವು. ತಾಲ್ಲೂಕು ವಕೀಲರ ಸಂಘ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!