Chelur : ಚೇಳೂರು ತಾಲ್ಲೂಕಿನ ಚೀಲಕಲನೇರ್ಪು ಗ್ರಾಮದಲ್ಲಿ ರೈತ ಶ್ರೀನಿವಾಸ (41) ಬುಧವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸಾಲಬಾಧೆ ತಾಳದೆ ಆತ್ಮಹತ್ಯೆ (Farmer Death) ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಬೆಳೆಸಾಲ ಸೇರಿದಂತೆ ಖಾಸಗಿಯವರಿಂದಲೂ ಶ್ರೀನಿವಾಸ ₹15 ಲಕ್ಷ ಸಾಲ ಮಾಡಿಕೊಂಡಿದ್ದರು, ವರ್ಷದಿಂದ ವರ್ಷಕ್ಕೆ ಸಾಲಕ್ಕೆ ಬಡ್ಡಿ ಹೆಚ್ಚುತ್ತಿದ್ದು ಮತ್ತೊಂದೆಡೆ ಬೆಳೆದಿದ್ದ ಬೆಳೆಗಳಿಗೆ ಸೂಕ್ತ ದರ ಸಿಗದೆ ಪ್ರತಿ ಬಾರಿಯೂ ನಷ್ಟದ ಸುಳಿಗೆ ಸಿಲುಕುತ್ತಿದ್ದರು. ಇದರಿಂದ ಮನನೊಂದು ಬುಧವಾರ ರಾತ್ರಿ ಎಂಟು ಗಂಟೆ ವೇಳೆ ತನ್ನ ಹೆಂಡತಿಗೆ ಕರೆ ಮಾಡಿ, ನೇಣು ಹಾಕಿಕೊಂಡು ಸಾಯುತ್ತಿರುವೆ ಎಂದು ತಿಳಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ .
ಘಟನಾ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಶ್ರೀನಿವಾಸಲು ನಾಯುಡು ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿ, ಪರವಾನಗಿ ಇಲ್ಲದೆ ಅಕ್ರಮವಾಗಿ ಮೀಟರ್ ಬಡ್ಡಿ ದಂಧೆ ಮತ್ತು ಚೀಟಿ ವ್ಯವಹಾರ ನಡೆಸುವುದು ಅಪರಾಧ. ಇಂಥ ದಂಧೆಯಲ್ಲಿ ತೊಡಗಿದವರ ವಿರುದ್ಧ ಯಾರಾದರೂ ದೂರು ನೀಡಿದರೆ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆಂಚರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ ತಹಶೀಲ್ದಾರ್ ಸತೀಶ್, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.