Chelur : ಲೋಕಾಯುಕ್ತ (Lokayukta) ಪೊಲೀಸ್ ಅಧಿಕಾರಿಗಳು ಚೇಳೂರು ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ತಾಲ್ಲೂಕಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಗಳು ಮತ್ತು ಅಹವಾಲು ಸಭೆಯನ್ನು (public grievances Meeting) ನಡೆಸಿದರು. ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಮೂರು ಅರ್ಜಿ, ತಹಶೀಲ್ದಾರ್‌ಗೆ ಸಂಬಂಧಿಸಿದ ಎರಡು ಅರ್ಜಿ ಹಾಗೂ ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಿಸಿದ ಎಂಟು ಅರ್ಜಿಗಳು ಸಲ್ಲಿಕೆಯಾದವು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಅಧಿಕಾರಿ ಎಲ್. ರಾಮ ಅರಸಿದ್ದಿ “ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಸರ್ಕಾರ ಇ- ಆಡಳಿತ ಸೇರಿದಂತೆ ಹಲವು ಸೇವೆ ಸೌಲಭ್ಯಗಳನ್ನು ಜಾರಿಗೊಳಿಸಿದ್ದು ಇವುಗಳನ್ನು ಬುದ್ದಿವಂತರು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಅಮಾಯಕರು ಮೋಸ ಹೊಗುತ್ತಿದ್ದಾರೆ. ಯಾವುದೇ ಇಲಾಖೆಯ ಸರ್ಕಾರಿ ಅಧಿಕಾರಿ, ಸಿಬ್ಬಂದಿ ನಿಮ್ಮ ಕೆಲಸಗಳನ್ನು ಮಾಡಿ ಕೊಡಲು ವಿಳಂಬವನ್ನು ಮಾಡಿದರೆ,ಹಣಕ್ಕೆ ಬೇಡಿಕೆ ಇಟ್ಟರೆ, ನಮಗೆ ದೂರು ಕೊಡಿ ನಾವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಸಭೆಗೆ ಮಾಹಿತಿ ಕೊರತೆಯಿಂದ ಬೆರಳೆಣಿಕೆಯಷ್ಟು ಜನ ಮಾತ್ರ ಬಂದಿದ್ದರು.ಡಿವೈಎಸ್ಪಿ ವೀರೇಂದ್ರ ಕುಮಾರ್, ಇನ್‌ಸ್ಪೆಕ್ಟರ್ ಶಿವಪ್ರಸಾದ್, ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ್, ಉಪ ತಹಶೀಲ್ದಾರ್ ಈಶ್ವರ್ ಎಂ.ಎನ್. ಹಾಗೂ ತಾಲೂಕು ಕಾರ್ಯ ನಿರ್ವಾಹಣಾ ಅಧಿಕಾರಿ ರಮೇಶ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.