Chikkaballapur : ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ (Bakrid Festival) ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಚಿಕ್ಕಬಳ್ಳಾಪುರ
ಬೆಳಿಗ್ಗೆಯೇ ಜನರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಬಾರಿ ಈದ್ಗಾ ಮೈದಾನವು ಮಳೆಯಿಂದ ತೇವಗೊಂಡಿದ್ದರಿಂದ ಹೆಚ್ಚು ಜನರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಲಿಲ್ಲ, ಬದಲಾಗಿ ನಗರದ ವಿವಿಧ ಬಡಾವಣೆಗಳ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಜಾಮಿಯಾ ಮಸೀದಿ, ಪೆಟ್ರೋಲ್ ಬಂಕ್ ಹಿಂಭಾಗದ ಮಸೀದಿ, ಶಾಂತಿ ನಗರ ಮಸೀದಿ ಮತ್ತು ಮುನ್ಸಿಪಲ್ ಬಡಾವಣೆಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಜರುಗಿತು.
ನಮಾಜು ಪೂರ್ಣಗೊಂಡ ನಂತರ ಪರಸ್ಪರ ಅಪ್ಪಿಕೊಂಡು ಶುಭಾಶಯ ಕೋರಿದರು. ಮೈದಾನದ ಆವರಣದ ಬಳಿಯಿದ್ದ ಬಡವರಿಗೆ ಮತ್ತು ನಿರ್ಗತಿಕರಿಗೆ ನೆರವು, ಮಕ್ಕಳಿಗೆ ಸಿಹಿ ತಿನಿಸುಗಳನ್ನು ನೀಡಿ ಹಬ್ಬದ ಸಂಭ್ರಮ ಹಂಚಿಕೊಂಡರು.
ಚಿಂತಾಮಣಿ
ಕಳೆದ 2 ವರ್ಷಳಿಂದ ಕಳೆಗುಂದಿದ್ದ ಬಲಿದಾನದ ಹಬ್ಬ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಭಾನುವಾರ ಮುಸ್ಲಿಮರು ಸಡಗರ ಸಂಭ್ರಮದಿಂದ ಶಾಂತಿಯುತವಾಗಿ ಆಚರಿಸಿದರು.
ಪ್ರತಿವರ್ಷ ಬಾಗೇಪಲ್ಲಿನ ರಸ್ತೆಯಲ್ಲಿರುವ ನಗರದ ದೊಡ್ಡಪೇಟೆಯಲ್ಲಿರುವ ಜಾಮಿಯಾ ಮಸೀದಿಯಿಂದ ಬಾಗೇಪಲ್ಲಿ ವೃತ್ತದ ಬಳಿ ಇರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಈ ಬಾರಿ ಮಳೆಯ ಪ್ರಯುಕ್ತ ಈದ್ಗಾ ಮೈದಾನಕ್ಕೆ ತೆರಳದೆ ತಮ್ಮ ತಮ್ಮ ಪ್ರದೇಶದ ಬಳಿಯಿರುವ ಮಸೀದಿಗಳಲ್ಲೇ ಸಾಮೂಹಿಕವಾಗಿ ನಮಾಜ್ ಮತ್ತು ಖತುಬಾ ಪಾರಾಯಣ ಮಾಡಿದರು.
ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಶಿಡ್ಲಘಟ್ಟ
ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಭಾನುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಈದ್ಗಾ ಮೈದಾನದಲ್ಲಿ ಸೇರಿ ಪ್ರಾಥನೆಯನೆಯನ್ನು ಸಲ್ಲಿಸದೇ ಮಳೆಯ ಕಾರಣದಿಂದ ನಗರದ ವಿವಿಧ ಮಸೀದಿಗಳಲ್ಲಿ ಮುಸ್ಲೀಮರು ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಜಮಾತ್ ಬಾಂಧವರು ಮಸೀದಿಗಳಲ್ಲಿ ದುವಾ ನೆರವೇರಿಸಿದರು.
ಬಾಗೇಪಲ್ಲಿ
ತ್ಯಾಗ ಹಾಗೂ ಬಲಿದಾನಗಳ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಭಾನುವಾರ ತಾಲ್ಲೂಕಿನಾದ್ಯಂತ ಮುಸ್ಲಿಮರು ವಿಜೃಂಭಣೆಯಿಂದ ಆಚರಿಸಿದರು.
ಭಾನುವಾರ ಬೆಳಗ್ಗೆ ಪಟ್ಟಣದ ವಿವಿಧ ಮಸೀದಿಗಳಿಂದ ಹೊರಟ ಮುಸ್ಲಿಮರು ಮೆರವಣಿಗೆ ಮೂಲಕ ಈದ್ಗಾ ಮೈದಾನದಲ್ಲಿ ತೆರಳಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ ಮಾಡಿದರು.
ಪಟ್ಟಣದ ಈದ್ಗಾ ಮೈದಾನದ ಪಕ್ಕದಲ್ಲಿರುವ ಸ್ಮಶಾನದಲ್ಲಿ ಮುಸ್ಲಿಮರು ಜಮಾಯಿಸಿ, ಅಗಲಿದ ತಮ್ಮ ಕುಟುಂಬಸ್ಥರ ಸಮಾಧಿಗಳನ್ನು ಸ್ವಚ್ಛಗೊಳಿಸಿದರು.
ಪ್ರಾರ್ಥನೆಯ ನಂತರ ಸಿಹಿ ಹಂಚಿ, ಪರಸ್ಪರ ತಬ್ಬಿಕೊಂಡು ಶುಭ ಹಾರೈಸಿದರು.