Chikkaballapur : ಚಿಕ್ಕಬಳ್ಳಾಪುರ ತಾಲೂಕಿನ ಹುನೇಗಲ್ ಗ್ರಾಮದ ಬಳಿ ಸಿಎನ್‍ಜಿ ಗ್ಯಾಸ್ ಸಿಲಿಂಡರ್ ತುಂಬಿದ ಕ್ಯಾಂಟರ್‌ಗೆ ಗ್ರಾನೈಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಉರಿದ ಗಂಭೀರ ಘಟನೆ ನಡೆದಿದೆ.
ಯೂ ಟರ್ನ್ ಪಡೆಯಲು ನಿಂತಿದ್ದ ಸಿಎನ್‍ಜಿ ಸಿಲಿಂಡರ್ ಲಾರಿಗೆ, ಕಲ್ಲು ದಿಮ್ಮೆಗಳು ತುಂಬಿದ್ದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದ್ದು, ಗ್ಯಾಸು ಸೋರಿಕೆಯಾಗಿ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ.
ಕ್ಯಾಂಟರ್‌ನ ಚಾಲಕ ನರಸಿಂಹಮೂರ್ತಿ ಮತ್ತು ಮತ್ತೊಬ್ಬ ಕಾರ್ಮಿಕ ಮಾದಪ್ಪಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಫೋಟದ ಪರಿಣಾಮಸ್ಥಳದಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದು, ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ.
ಪೊಲೀಸರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕ್ರೇನ್ ಸಹಾಯದಿಂದ ಹಾನಿಗೊಂಡ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದ್ದಾರೆ.