Chikkaballapur : ಮುಡಾ ಪ್ರಕರಣದಲ್ಲಿ (MUDA Case) ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaih) ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ (Thawar Chand Gehlot) ಅವರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿ ಸೋಮವಾರ ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಸೇರಿದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಿಡ್ಲಘಟ್ಟ ವೃತ್ತದವರೆಗೆ ಮೆರವಣಿಗೆ ನಡೆಸಿ ಬಿಜೆಪಿ, ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು (Congress Protest).
ಸಂವಿಧಾನ ರಕ್ಷಕರಿಂದಲೇ ಸಂವಿಧಾನ ವಿರೋಧಿ ನಡೆ, ಕಿಯೋನಿಕ್ಸ್ ಹಗರಣದಲ್ಲಿ ₹ 1,500 ಕೋಟಿ ಲೂಟಿ ಹೊಡೆದ ಬಿಜೆಪಿ, ಗುರು ರಾಘವೇಂದ್ರ ಬ್ಯಾಂಕ್ ಲೂಟಿ–ಹೀಗೆ ಬಿಜೆಪಿ ಆಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಹಗರಣಗಳ ಫ್ಲೆಕ್ಸ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಯುವಕಾಂಗ್ರೆಸ್ ಕಾರ್ಯಕರ್ತರು ಅರೆ ಬೆತ್ತಲೆಯಾಗಿ ರಸ್ತೆಯಲ್ಲಿ ಕುಳಿತರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸದಸ್ಯ ಎಂ.ಆರ್.ಸೀತಾರಾಮ್, ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬಿಜೆಪಿ ಹಾಗೂ ರಾಜ್ಯಪಾಲರ ವಿರುದ್ಧ ಭಾಷಣ ಮಾಡಿದರು.
ಮಾಜಿ ಸಚಿವ ವಿ.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಅನಸೂಯಮ್ಮ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಮುಖಂಡ ನಂದಿ ಆಂಜನಪ್ಪ, ಪುಟ್ಟು ಆಂಜನಪ್ಪ, ರಾಜೀವ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯ್ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.