Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊಸಹುಡ್ಯ (Hosahudya) ಗ್ರಾಮದಲ್ಲಿ ಶನಿವಾರ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಿಗ್ಗೆ 10.30ರ ಸುಮಾರಿನಲ್ಲಿ ಜಿಲ್ಲಾಧಿಕಾರಿ (Deputy Commissioner) ಹಾಗೂ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದ ಪ್ರವೇಶದಲ್ಲಿಯೇ ಮಹಿಳೆಯರು ಜಿಲ್ಲಾಧಿಕಾರಿ ಅವರಿಗೆ ಆರತಿ ಬೆಳಗಿ, ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ನಂತರ ಅಧಿಕಾರಿಗಳು ಗ್ರಾಮದ ಲಕ್ಷ್ಮಿಜನಾರ್ದನ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಜಿಲ್ಲಾಧಿಕಾರಿಗಳು ಕೃಷಿ ವಸ್ತು ಪ್ರದರ್ಶನ, ತೋಟಗಾರಿಕೆ ಬೆಳೆಗಳ ವಸ್ತು ಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಪೌಷ್ಟಿಕ ಆಹಾರ ಸಪ್ತಾಹ ಶಿಬಿರ, ಬಾಲ್ಯವಿವಾಹ ತಡೆ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮಗಳಿಗೆ ಭೇಟಿ ನೀಡಿದರು. ನಂತರ ಗಿಡ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು. ನಂತರ ಜಿಲ್ಲಾಧಿಕಾರಿ ಆರ್. ಲತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಂದ ವಿವಿಧ ವಿಷಯ ಕುರಿತು ಅಹವಾಲು ಸ್ವೀಕರಿಸಿದರು.
‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಹೊಸಹುಡ್ಯಕ್ಕೆ ಬಂದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ (Dr. K. Sudhakar) ತಮ್ಮನಾಯಕನಹಳ್ಳಿಯಲ್ಲಿ ಬಿ.ಆರ್. ಅಂಬೇಡ್ಕರ್ ಭವನ, ಜಾತವಾರ ಗ್ರಾಮದಲ್ಲಿ ಗ್ರಾಮ ವಿಕಾಸ್ ಯೋಜನೆಯಡಿ ನಿರ್ಮಾಣವಾಗಿರುವ ಗರಡಿ ಮನೆ ಹಾಗೂ ಸಮುದಾಯ ಭವನ , ಗಿಡ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ರನ್ನಿಂಗ್ ಟ್ರ್ಯಾಕ್, ಬಾಸ್ಕೆಟ್ ಬಾಲ್, ವಾಲಿಬಾಲ್, ಕೊಕ್ಕೊ ಹಾಗೂ ಕಬಡ್ಡಿ ಆಟಗಳ ಮೈದಾನ ಉದ್ಘಾಟಿಸಿ, ರಾಷ್ಟ್ರೀಯ ಹೆದ್ದಾರಿ 234ರಿಂದ ದೊಡ್ಡಯಲ್ಲಮ್ಮ ದೇವಸ್ಥಾನದವರೆಗಿನ ಸಿ.ಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಹೊಸಹುಡ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ 4,266 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಾಗೂ ಕಾರ್ಯಾದೇಶ ಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ” ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ₹ 1 ಲಕ್ಷ ಕೋಟಿ ಹೂಡಿಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗುತ್ತದೆ ಎಂದು ವಿಶ್ವಾಸದಿಂದ ಹೇಳುತ್ತೇವೆ ಜಿಲ್ಲೆಯಲ್ಲಿ ವಿಶೇಷ ಕೈಗಾರಿಕಾ ವಲಯ ತಲೆ ಎತ್ತಲಿದ್ದು ಕನಿಷ್ಠ 50 ಸಾವಿರ ಯುವಕರಿಗೆ ಉದ್ಯೋಗ ಸಿಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಲಜೀವನ ಯೋಜನೆಯನ್ನು ಜಾರಿಗೊಳಿಸಿ ಕುಡಿಯುವ ನೀರನ್ನು ನಲ್ಲಿ ಮೂಲಕ ಎಲ್ಲ ಮನೆಗಳ ಬಾಗಿಲಿಗೆ ತರುವ ಕೆಲಸವನ್ನು ಮಾಡಿದ್ದು ಈ ಹಿಂದಿನ ಯಾವ ಸರ್ಕಾರಗಳೂ ಈ ಕಾರ್ಯ ಮಾಡಲಿಲ್ಲ. ಸರ್ಕಾರದ ಸೌಲಭ್ಯಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡುತ್ತೇವೆ” ಎಂದು ಹೇಳಿದರು.
ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಹೊಸಹುಡ್ಯ ಗ್ರಾಮದಲ್ಲಿಯೇ ರಾತ್ರಿ ವಾಸ್ತವ್ಯ ಹೂಡಿದರು.
ಜಿ.ಪಂ. ಮುಖ್ಯ ಕಾರ್ಯ ನಿರ್ವಣಾ ಧಿಕಾರಿ ಪಿ. ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದ ರೆಡ್ಡಿ ಬಾಬು, ಮುಖಂಡರಾದ ಮರಳು ಕುಂಟೆ ಕೃಷ್ಣಮೂರ್ತಿ, ನವೀನ್ ಕಿರಣ್, ಹೊಸಹುಡ್ಯ ನಾರಾಯಣಸ್ವಾಮಿ, ಗಿಡ್ನ ಹಳ್ಳಿ ನಾರಾಯಣಸ್ವಾಮಿ, ಕೇಶವಾರ ರಾಮಣ್ಣ, ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur