Covid-19 ಸೋಂಕು ಮತ್ತೆ ಜಿಲ್ಲೆಯಲ್ಲೂ ತಲೆ ಎತ್ತಿದೆ. ಜಿಲ್ಲೆಯಲ್ಲಿ ನಾಲ್ಕು ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಗರ್ಭಿಣಿಯರು ಸೇರಿದಂತೆ ಒಟ್ಟು ನಾಲ್ಕು ಮಂದಿ ಸೋಂಕಿತರಾಗಿದ್ದಾರೆ. ಈ ನಡುವೆ, ಜಿಲ್ಲಾಡಳಿತ ಎಚ್ಚರಿಕೆಯ ಕ್ರಮ ಕೈಗೊಂಡಿದೆ.
ಸೋಂಕಿತರ ವಿವರ:
- ಗೌರಿಬಿದನೂರು ತಾಲ್ಲೂಕಿನ 7 ತಿಂಗಳ ಗರ್ಭಿಣಿ
- ಬಾಗೇಪಲ್ಲಿ ತಾಲ್ಲೂಕಿನ 6 ತಿಂಗಳ ಗರ್ಭಿಣಿ
- ಚಿಂತಾಮಣಿ ತಾಲ್ಲೂಕಿನ 17 ವರ್ಷದ ಯುವಕ
- ಚಿಕ್ಕಬಳ್ಳಾಪುರ ತಾಲ್ಲೂಕಿನ 30 ವರ್ಷದ ಮಹಿಳೆ
ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೋವಿಡ್ ನಿಯಂತ್ರಣ ಕುರಿತ ಸಭೆ ನಡೆಯಿತು. ಅವರು ಮಾತನಾಡುತ್ತಾ, “ಬೆಂಗಳೂರು ನಿಮ್ಹಾನ್ಸ್ಗೆ ಕಳುಹಿಸಿದ್ದ 13 ಗಂಟಲು ಮಾದರಿಗಳ ಪೈಕಿ ನಾಲ್ಕರಲ್ಲಿ ಕೋವಿಡ್ ದೃಢವಾಗಿದೆ. ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
“2020 ರಿಂದ 2023ರ ನಡುವೆ ಹಲವು ಕೋವಿಡ್ ಅಲೆಗಳನ್ನು ನಾವು ಕಂಡಿದ್ದೇವೆ. ಗರ್ಭಿಣಿಯರು, 60 ವರ್ಷ ಮೇಲ್ಪಟ್ಟವರು, ಡಯಾಬಿಟಿಸ್, ಬಿ.ಪಿ., ಕಿಡ್ನಿ ಸಮಸ್ಯೆ ಇರುವವರು ಮತ್ತು ಮಕ್ಕಳು ಹೆಚ್ಚಿನ ಅಪಾಯದಲ್ಲಿದ್ದಾರೆ,” ಎಂದರು.
ತೀವ್ರ ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ವಾಸನೆ ಮತ್ತು ರುಚಿ ನಷ್ಟ – ಇವೆಲ್ಲಾ ಸೋಂಕಿನ ಲಕ್ಷಣಗಳು
- ಸೋಂಕಿತರ ಸಂಪರ್ಕದಿಂದ ದೂರವಿರುವುದು
- ಶಂಕಿತರು ಮನೆದಲ್ಲಿಯೇ ಪ್ರತ್ಯೇಕವಾಗಿರಬೇಕು
- ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು
- ಕೆಮ್ಮುವಾಗ/ಸೀನುವಾಗ ಮಾಸ್ಕ್ ಅಥವಾ ಬಟ್ಟೆ ಉಪಯೋಗಿಸಬೇಕು
- ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು
- ಸುರಕ್ಷಿತವಲ್ಲದ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಸ್ಪರ್ಶಿಸಬಾರದು
- ಸೋಂಕಿತ ವ್ಯಕ್ತಿಯ ಬಳಕೆಯ ವಸ್ತುಗಳನ್ನು ಮುಟ್ಟಬಾರದು
ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಮಾಸ್ಕ್ ಧರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ತುರ್ತು ಸಂದರ್ಭಗಳಲ್ಲಿ 104 ಆರೋಗ್ಯ ಸಹಾಯವಾಣಿಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತೀಕ್ ಪಾಷಾ, ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್, ಸರ್ವೇಕ್ಷಣಾಧಿಕಾರಿ ಡಾ. ಎಂ.ಎಸ್. ಕೃಷ್ಣಪ್ರಸಾದ್, ಡಾ. ಶಿವಕುಮಾರ್, ಅಬಕಾರಿ ಅಧೀಕ್ಷಕ ದೀಪಕ್, ಸಾರಿಗೆ ಇಲಾಖೆ ಅಧಿಕಾರಿ ಎಂ. ಶ್ರೀನಿವಾಸ್, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.