Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಶೆಟ್ಟಿಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಹಾಗೂ CC Road ಕಾಮಗಾರಿಗೆ ಭೂಮಿ ಪೂಜೆ, ಸಬ್ಬೇನಹಳ್ಳಿ–ಈತಮಾಕಾಲಹಳ್ಳಿ ರಸ್ತೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಸರ್ಕಾರಿ ಗೋಕುಂಟೆ ಉದ್ಘಾಟನೆ ಮತ್ತು ಚಿಕ್ಕಬಳ್ಳಾಪುರದ ಕಂದವಾರ ಕೆರೆಯ (Kandavara Lake) ಬಳಿ ಇಕೊ ಪಾರ್ಕ್ (Eco Park) ಮತ್ತು ಸಂಗೀತ ಕಾರಂಜಿ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಬುಧವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ನೆರವೇರಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಸಚಿವರು “ಈ ರೀತಿಯ ಕೆಲಸಗಳು ಜಿಲ್ಲಾ ಮಟ್ಟದಲ್ಲಿ ಉತ್ತಮ ಅಧಿಕಾರಿಗಳು ಇದ್ದರೆ ಮಾತ್ರ ಸಾಧ್ಯ. ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದೊಂದಿಗೆ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದ ಕಾರಣದಿಂದ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 700 ಕಿ.ಮೀಗೂ ಹೆಚ್ಚು ಕಾಲುವೆ ಮಾಡಿದ್ದಾರೆ. ಪ್ರತಿ ಗ್ರಾ.ಪಂನಲ್ಲಿ ಗೋಕುಂಟೆ ನಿರ್ಮಿಸಲು ಅಧಿಕಾರಿಗಳು ಮುಂದಾಗಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್, ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಮಂಚನ ಬಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಮ್ಮ, ಉಪಾಧ್ಯಕ್ಷ ಶ್ರೀಧರ್, ಪಿಡಿಒ ಪವಿತ್ರಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.