Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ (Dr M C Sudhakar) ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ (KDP Meeting) ನಡೆಯಿತು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಫಾಯಿ ಕರ್ಮಚಾರಿಗಳ 30 ಮಕ್ಕಳಿಗೆ ನೀಡಲಾಗುವ ಪ್ರೋತ್ಸಾಹ ಧನದ ಚೆಕ್‌ಗಳನ್ನು ಸಚಿವರು ವಿತರಿಸಿದರು.
ಸಭೆಯಲ್ಲಿ ಮಾತನಾಡಿದ ಸಚಿವರು “ಬರದಿಂದ ಜಿಲ್ಲೆಯಲ್ಲಿ 75,500 ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಆಗಿದ್ದು ಕೇಂದ್ರ ಬರ ಅಧ್ಯಯನ ತಂಡವು ಜಿಲ್ಲೆಗೆ ಭೇಟಿ ನೀಡಿತ್ತು. ಜಿಲ್ಲೆಗೆ ₹ 64.70 ಕೋಟಿ ಪರಿಹಾರ ಬೇಕು ಎಂಬ ಪ್ರಸ್ತಾವವನ್ನು ಈ ಅಧ್ಯಯನ ತಂಡಕ್ಕೆ ಎದುರು ಮಂಡಿಸಲಾಗಿದೆ. 550 ಹೆಕ್ಟೇರ್‌ನಲ್ಲಿ ಬದು ನಿರ್ಮಾಣ ಸೇರಿದಂತೆ ಬರದ ಸಮಸ್ಯೆ ನಿವಾರಣೆಗೆ ಕ್ರಮವಹಿಸಲಾಗಿದೆ. ಪಶುಸಂಗೋಪನಾ ಇಲಾಖೆಯ ಮಾಹಿತಿ ಪ್ರಕಾರ 20 ವಾರಕ್ಕೆ ಸಾಕಾಗುವ ಮೇವು ಜಿಲ್ಲೆಯಲ್ಲಿ ಇದ್ದು ಈಗ ಬೆಳೆಯುತ್ತಿರುವ ಮೇವು ಸಹ 10 ವಾರಕ್ಕೆ ಆಗುತ್ತದೆ. ಗೋಶಾಲೆ ತೆರೆಯುವ ಬೇಡಿಕೆ ಬಂದರೆ ಕ್ರಮವಹಿಸಲಾಗುವುದು. ಬರ ಪರಿಹಾರ ಕಾಮಗಾರಿಗಳಲ್ಲಿ ಕೊಳವೆ ಬಾವಿಯನ್ನು ಕೊರೆಯಲು ಸಾಧ್ಯವಿಲ್ಲ. ಜಲಜೀವನ ಮಿಷನ್‌ನಲ್ಲಿ ಕುಡಿಯುವ ನೀರು ಒದಗಿಸಲಾಗುವುದು ” ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಸುಬ್ಬಾರೆಡ್ಡಿ, ಬಿ.ಎನ್.ರವಿಕುಮಾರ್, ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಡಿಸಿ ಪಿ.ಎನ್.ರವೀಂದ್ರ, ಎಸ್‌ಪಿ ಡಿ.ಎಲ್.ನಾಗೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿ.ಪಂ.ಉಪ ಕಾರ್ಯದರ್ಶಿ ಎನ್.ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.