Chikkaballapur : ಬೆಂಗಳೂರಿನ ‘ರಂಗ ಕಹಳೆ’ ರಂಗ ತಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಡಿಸೆಂಬರ್ 27 ರಿಂದ 29 ರವರೆಗೆ ಮೂರು ದಿನಗಳ ಕಾಲ ‘ಕುವೆಂಪು ನಾಟಕೋತ್ಸವ’ವನ್ನು ಆಯೋಜಿಸಲಾಗಿದೆ. ಈ ವಿಶೇಷ ನಾಟಕೋತ್ಸವದ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್ ಅವರು ಗುರುವಾರ ಅನಾವರಣಗೊಳಿಸಿ ಚಾಲನೆ ನೀಡಿದರು.
ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಚಿಂತನೆಗಳು, ಆದರ್ಶಗಳು ಮತ್ತು ಅವರು ಸಾರಿದ ‘ವಿಶ್ವಮಾನವ’ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರತಿ ದಿನ ಸಂಜೆ ನಾಟಕ ಪ್ರದರ್ಶನ ಹಾಗೂ ಕುವೆಂಪು ಅವರ ವಿಚಾರಧಾರೆಗೆ ಸಂಬಂಧಿಸಿದ ಕಿರಿಚಿತ್ರಗಳ ಪ್ರದರ್ಶನ ಜರುಗಲಿದೆ.
ರಂಗ ಕಹಳೆ ಸಂಸ್ಥೆಯ ಸಂಚಾಲಕ ಓಹಿಲೇಶ ಲಕ್ಷ್ಮಣ ಮಾತನಾಡಿ, “ನಮ್ಮ ಸಂಸ್ಥೆಯು ಕಳೆದ 30 ವರ್ಷಗಳಿಂದ ಕುವೆಂಪು ಅವರ ಆದರ್ಶಗಳನ್ನು ರಂಗಭೂಮಿಯ ಮೂಲಕ ಪಸರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಜಿಲ್ಲೆಯ ಕಲಾಭಿಮಾನಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ನಾಟಕೋತ್ಸವವನ್ನು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಪ್ರೊ.ಕೋಡಿ ರಂಗಪ್ಪ ಹಾಗೂ ರಂಗ ತಂಡದ ಸದಸ್ಯರು ಉಪಸ್ಥಿತರಿದ್ದರು.
